Saturday, 23rd November 2024

Swara Bhaskar: ಪತಿಗೆ ಹೀನಾಯ ಸೋಲು; EVM ಕ್ಷಮತೆ ಬಗ್ಗೆ ಸ್ವರಾ ಭಾಸ್ಕರ್‌ ಪ್ರಶ್ನೆಗಳ ಸುರಿಮಳೆ

Swara bharkar

ಮುಂಬೈ : ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ (Maharashtra Assembly Election) ಫಲಿತಾಂಶಗಳು ಹೊರ ಬೀಳುತ್ತಿದೆ. ರಾಜ್ಯದ 288 ವಿಧಾನಸಭಾ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಸದ್ಯಕ್ಕೆ ಚುನಾವಣಾ ಫಲಿತಾಂಶದ ಸಂಪೂರ್ಣ ಚಿತ್ರಣ ಸಿಕ್ಕಿದೆ. ಬಹು ಕುತೂಹಲ ಮೂಡಿಸಿದ್ದ ನಟಿ ಸ್ವರಾ ಭಾಸ್ಕರ್‌ (Swara Bhaskar) ಪತಿ ಫಹಾದ್ ಅಹ್ಮದ್ ಸ್ಪರ್ಧಿಸಿದ್ದ ಅನುಶಕ್ತಿ ನಗರ (Anushakti Nagar) ಕ್ಷೇತ್ರದ ಚುನಾವಣೆ ಪೈಪೋಟಿಯು ಈ ಮೊದಲಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೀಗ ಈ ಕ್ಷೇತ್ರದಲ್ಲಿ ಫಹಾದ್‌ ಅವರು ಎನ್‌ಸಿಪಿ(ಅಜಿತ್‌ ಪವಾರ್)‌ ಬಣದ ಸನಾ ಮಲಿಕ್ ವಿರುದ್ಧ ಸೋಲುಂಡಿದ್ದಾರೆ.

ಅನುಶಕ್ತಿ ನಗರದಲ್ಲಿ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಚುನಾವಣಾ ಕಣದಲ್ಲಿದ್ದರು. ಇದರಲ್ಲಿ ಸನಾ ಮಲಿಕ್ ಎನ್‌ಸಿಪಿ-ಅಜಿತ್ ಪವಾರ್ ಬಣದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ಎನ್‌ಸಿಪಿ ಯ ಪ್ರಭಾವಿ ನಾಯಕ ನವಾಬ್ ಮಲಿಕ್ ಅವರ ಪುತ್ರಿ . ಮತ್ತೊಂದೆಡೆ, ನಟಿ ಸ್ವರಾ ಭಾಸ್ಕರ್ ಪತಿ ಫಹಾದ್ ಅಹ್ಮದ್ (ಎನ್‌ಸಿಪಿ) ಶರದ್ ಪವಾರ್ ಬಣದಿಂದ ಸ್ಪರ್ಧಿಸಿದ್ದರು. ಇದೀಗ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಫಹಾದ್‌ ಅಹ್ಮದ್‌ ಅನುಶಕ್ತಿ ನಗರ ಕ್ಷೇತ್ರದಲ್ಲಿ ಹೀನಾಯವಾಗಿ ಸೋತಿದ್ದಾರೆ.

ಪತಿ ಫಹಾದ್‌ ಹಿನ್ನಡೆಯಾಗುತ್ತಿದ್ದಂತೆ ಟ್ವೀಟ್‌ ಮಾಡಿದ್ದ ಸ್ವರಾ ಭಾಸ್ಕರ್‌

ಪ್ರಾರಂಭಿಕ ಮತ ಎಣಿಕೆಯ ಹಂತದಲ್ಲಿ ಮುನ್ನಡೆಯಲ್ಲಿದ್ದ ಫಹಾದ್‌ ಅಹ್ಮದ್‌ ಅವರು ಹಿನ್ನಡೆಯಾಗುತ್ತಿದ್ದಂತೆ ಅವರ ಪತ್ನಿ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ ಇವಿಎಂ ಕಾರ್ಯ ಕ್ಷಮತೆ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಶ್ನಿಸಿದ್ದರು. “ಫಹಾದ್‌ ಅಹ್ಮದ್‌ ಅವರು ಸನಾ ಮಲಿಕ್‌ ಅವರನ್ನು ಮೂರು ಸಾವಿರ ಮತಗಳಿಂದ ಹಿಂದಿಕ್ಕಿದ್ದರು. ಹದಿನೇಳು ಸುತ್ತಿನ ಮತ ಎಣಿಕೆಯವರೆಗೂ ಮುನ್ನಡೆ ಸಾಧಿಸುತ್ತಿದ್ದ ಅಹ್ಮದ್‌ ಅವರಿಗೆ ಈಗ ಹಿನ್ನೆಡೆಯಾಗಿದೆ. ಇದು ಹೇಗೆ ಸಾಧ್ಯ? ಎಲ್ಲಾ ದಿನವೂ ಮತ ಚಲಾಯಿಸಿದ ಯಂತ್ರಗಳು 99% ಬ್ಯಾಟರಿಯನ್ನು ಹೇಗೆ ಹೊಂದುತ್ತವೆ? 99 % ಚಾರ್ಜ್‌ ಆದ ಎಲ್ಲಾ ಬ್ಯಾಟರಿಗಳು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ಮಾತ್ರ ಯಾಕೆ ಮತಗಳನ್ನು ನೀಡುತ್ತವೆ?” ಎಂದು ನಟಿ ಸ್ವರಾ ಭಾಸ್ಕರ್‌ ಟ್ವೀಟ್‌ ಮಾಡಿದ್ದಾರೆ. ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡ ನಂತರ ಚುನಾವಣಾ ಆಯೋಗವನ್ನು ಈ ಕುರಿತು ಪ್ರಶ್ನಿಸುತ್ತೇನೆ ಎಂದಿದ್ದರು. ಟ್ವೀಟ್‌ ಮಾಡಿದ ಪೋಸ್ಟ್‌ ನಲ್ಲಿ ಚುನಾವಣಾ ಆಯೋಗ ಮತ್ತು ಮಹಾ ವಿಕಾಸ್‌ ಅಘಾಡಿ ಬಣದ ಕೆಲವು ನಾಯಕರನ್ನು ಟ್ಯಾಗ್‌ ಕೂಡ ಮಾಡಿದ್ದಾರೆ.

ಚುನಾವಣಾ ಗೆಲುವಿಗಾಗಿ ಮೌಲ್ವಿಯನ್ನು ಭೇಟಿಯಾಗಿದ್ದ ದಂಪತಿ

ಅನುಶಕ್ತಿ ನಗರದಿಂದ ಚುನಾವಣಾ ಕಣಕ್ಕೆ ಇಳಿದಿದ್ದ ಫಹಾದ್‌ ಅಹ್ಮದ್‌ ತನ್ನ ಪತ್ನಿ ಸ್ವರಾ ಭಾಸ್ಕರ್‌ ಜೊತೆಗೂಡಿ ಗೆಲುವಿಗಾಗಿ ಮೌಲಾನಾ ಸಜ್ಜದ್ ನೊಮಾನಿ ಅವರನ್ನು ಭೇಟಿ ಮಾಡಿದ್ದರು. ಸ್ತ್ರೀ ಶಿಕ್ಷಣವನ್ನೇ ವಿರೋಧಿಸಿದ್ದ ಮೌಲಾನ ಭೇಟಿಯಾಗಿ ಆಶೀರ್ವಾದ ಪಡೆದದ್ದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಮೌಲ್ವಿಯನ್ನು ಭೇಟಿಯಾದರೂ ಗೆಲುವು ಸಿಗಲಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಈಗ ಗೇಲಿ ಮಾಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Maharashtra Election: ಮಹಾರಾಷ್ಟ್ರ ಚುನಾವಣೆ; ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ