ನವದೆಹಲಿ: ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 2035 ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ, 2040 ರ ವೇಳೆಗೆ ಚಂದ್ರನ ಮೇಲೆ ಭಾರತೀಯನ ಕಳುಹಿಸುವ ಗುರಿಯನ್ನು ನೀಡಿದರು.
ಗಗನಯಾನ ಮಿಷನ್ ಯೋಜನೆಯಡಿ, ಅ.21 ರ ಗಗನಯಾನಿಗಳ ರಕ್ಷಣೆಯ ವಾಹಕದ ಮೊದಲ ಪ್ರಾಯೋಗಿಕ ಪರೀಕ್ಷೆಯ ಸಿದ್ಧತಾ ಸಭೆಯಲ್ಲಿ ಅವರು ವಿಜ್ಞಾನಿಗಳಿಗೆ ಈ ನಿರ್ದೇಶನಗಳನ್ನು ನೀಡಿದರು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಅಧಿಕೃತ ಹೇಳಿಕೆ ನೀಡಿದೆ.
ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಕೇಂದ್ರ ಬಾಹ್ಯಾಕಾಶ ಸಚಿವ ಡಾ.ಜಿತೇಂದ್ರ ಸಿಂಗ್ ಸೇರಿದಂತೆ ಇತರ ವಿಜ್ಞಾನಿಗಳು ಭಾಗವಹಿಸಿದ್ದ ಸಭೆಯಲ್ಲಿ ಗಗನಯಾನ್ ಮಿಷನ್ನ ಸಿದ್ಧತೆಯ ಪರಿಶೀಲನೆ ಮತ್ತು 2025 ರಲ್ಲಿ ಅದರ ಉಡಾವಣೆಯನ್ನು ದೃಢೀಕರಿಸಲಾಯಿತು.
ಇತ್ತೀಚಿನ ಚಂದ್ರಯಾನ-3 ಮತ್ತು ಆದಿತ್ಯ L1 ಮಿಷನ್‌ಗಳ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಗಳು, ಇದೇ ಯಶಸ್ಸಿನ ಆಧಾರದ ಮೇಲೆ ಮುಂದಿನ ಯೋಜನೆಗಳನ್ನು ರೂಪಿಸಬೇಕು. 2035ರ ವೇಳೆಗೆ ಭಾರತ ಮೊದಲ ಅಂತರಿಕ್ಷ ನಿಲ್ದಾಣ ಹೊಂದ ಬೇಕು. ಜೊತೆಗೆ 2040 ರ ವೇಳೆಗೆ ಭಾರತೀ ಯನನ್ನು ಚಂದ್ರನ ಮೇಲೆ ಇಳಿಸುವುವ ಮಹತ್ವಾಕಾಂಕ್ಷಿ ಗುರಿಯನ್ನು ಹೊಂದಬೇಕು ಎಂದು ವಿಜ್ಞಾನಿಗಳಿಗೆ ಪ್ರಧಾನಿ ಹೇಳಿದರು.
ಚಂದ್ರನ ಮೇಲೆ ಮಾನವ ಇಳಿಸುವ ಯೋಜನೆ ಸೇರಿದಂತೆ ಎಲ್ಲ ಮಹತ್ವಾಕಾಂಕ್ಷಿ ಗುರಿಗಳ ಸಾಕಾರಕ್ಕೆ ಕೇಂದ್ರ ಬಾಹ್ಯಾಕಾಶ ಇಲಾಖೆಯು ಮಾರ್ಗ ಸೂಚಿ ಅಭಿವೃದ್ಧಿಪಡಿಸುತ್ತದೆ ಎಂದು ಭರವಸೆ ನೀಡಲಾಗಿದೆ.
ಚಂದ್ರಯಾನ ಯೋಜನೆಗಳ ಸರಣಿ, ಹೊಸ ಪೀಳಿಗೆಯ ಉಡಾವಣಾ ವಾಹನ (NGLV), ಹೊಸ ಉಡಾವಣಾ ಕೇಂದ್ರ ನಿರ್ಮಾಣ, ಮಾನವ ಸಹಿತ ಗಗನ ಯಾನ, ಬಾಹ್ಯಾಕಾಶ ಕೇಂದ್ರಗಳ ಸ್ಥಾಪನೆ, ಇದಕ್ಕೆ ಸಂಬಂಧಿತ ತಂತ್ರಜ್ಞಾನಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.