Wednesday, 9th October 2024

ತಿಲಕ, ಹಿಜಾಬ್ ಧರಿಸಿದ್ದಕ್ಕೆ ಥಳಿತ: ಶಿಕ್ಷಕ ಅಮಾನತು

ರಜೌರಿ: ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ತಿಲಕ ಮತ್ತು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಥಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.

ಖದುರಿಯನ್ ಪಂಚಾಯತ್ ಡ್ರಮ್ಮಾನ್ ನ ಸರ್ಕಾರಿ ಶಾಲೆಯ ಶಿಕ್ಷಕ ನಿಸಾರ್ ಅಹ್ಮದ್ ಎಂಬಾತ ಹಣೆಗೆ ತಿಲಕ ಇಟ್ಟುಕೊಂಡಿದ್ದ ಹಾಗೂ ಹಿಜಾಬ್ ಧರಿಸಿದ್ದ 4ನೇ ತರಗತಿಯ ವಿದ್ಯಾರ್ಥಿನಿಯರಿಗೆ ಥಳಿಸಿರುವುದಾಗಿ ವರದಿ ವಿವರಿಸಿದೆ. ಶಿಕ್ಷಕನ ವಿರುದ್ಧ ದೂರು ದಾಖಲಾಗಿದ್ದು, ನಿಸಾರ್ ಅಹ್ಮದ್ ನನ್ನು ಬಂಧಿಸಲಾಗಿದೆ. ಆದರೆ ವಿದ್ಯಾರ್ಥಿನಿಯರನ್ನು ಥಳಿಸಿರುವ ಹಿಂದೆ ಈವರೆಗೆ ಯಾವುದೇ ಕೋಮುದ್ವೇಷದ ಉದ್ದೇಶ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರು ಪ್ರಕರಣದ ಕುರಿತು ಜಂಟಿಯಾಗಿ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.