Friday, 13th December 2024

ವಾಟ್ಸ್‌ಆಯಪ್‌ನಲ್ಲಿ ಪತ್ನಿಗೆ ತ್ರಿವಳಿ ತಲಾಕ್‌: ಪತಿ ಬಂಧನ

ಹೈದರಾಬಾದ್: ಮುಸ್ಲಿಂ ಹೆಣ್ಣು ಮಕ್ಕಳ ಜೀವನಕ್ಕೇ ಕುತ್ತು ತರುತ್ತಿದ್ದ ತ್ರಿವಳಿ ತಲಾಕ್ (Triple Talaq) ಎಂಬ ಅನಿಷ್ಟ ಪದ್ಧತಿಯನ್ನು ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ.

ಆದರೆ, ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಕೆ.ಆರ್‌.ಕೆ. ಕಾಲೋನಿಯಲ್ಲಿ ವ್ಯಕ್ತಿ ವಾಟ್ಸ್‌ಆಯಪ್‌ನಲ್ಲಿ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. 32 ವರ್ಷ ವಯಸ್ಸಿನ ಅಬ್ದುಲ್ ಅತೀಖ್ ಬಂಧಿತ ವ್ಯಕ್ತಿ. ಆತ ತನ್ನ ಪತ್ನಿಗೆ ವಾಟ್ಸ್‌ಆಯಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಮೂಲಕ ತ್ರಿವಳಿ ತಲಾಕ್‌ ನೀಡಿದ್ದ.

ಅದಿಲಾಬಾದ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಿ. ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ʼʼಅಬ್ದುಲ್ ಅತೀಖ್ 2017ರಲ್ಲಿ ಜಾಸ್ಮಿನ್‌ (28) ಎಂಬಾಕೆಯೊಂದಿಗೆ ವಿವಾಹವಾಗಿದ್ದ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲಾರಂಭಿಸಿತು. ಕಳೆದ ವರ್ಷ ಜಾಸ್ಮಿನ್‌ ತಮ್ಮ ಪತಿಯ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ದರುʼʼ ಎಂದು ಹೇಳಿದ್ದಾರೆ.

ಕುಟುಂಬ ನಿರ್ವಹಣೆಗೆ ಹಣ ನೀಡಬೇಕೆಂದು ಜಾಸ್ಮಿನ್‌ ಕೋರ್ಟ್‌ನಲ್ಲಿ ವಾದಿಸಿದ್ದರು. ಅದರಂತೆ ಕೋರ್ಟ್‌ ಪ್ರತಿ ತಿಂಗಳು ಜಾಸ್ಮಿನ್‌ಗೆ 7,200 ರೂ. ಪಾವತಿಸುವಂತೆ ಅಬ್ದುಲ್ ಅತೀಖ್‌ಗೆ ಸೂಚಿಸಿತ್ತು. ಆದರೆ ಅತೀಖ್‌ ಕೋರ್ಟ್‌ ಸೂಚನೆಯನ್ನೂ ಧಿಕ್ಕರಿಸಿದ್ದ. ಹಣವನ್ನೇ ನೀಡುತ್ತಿರಲಿಲ್ಲʼʼ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಮತ್ತೊಮ್ಮೆ ಜಾಸ್ಮಿನ್‌ ನ್ಯಾಯಾಲಯದ ಮೊರೆ ಹೋದಾಗ, ಜಾಸ್ಮಿನ್‌ಗೆ ವಾಟ್ಸ್‌ಆಯಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಕಳುಹಿಸಿ ತ್ರಿವಳಿ ತಲಾಕ್‌ ನೀಡಿದ್ದ. ಈ ಮೆಸೇಜ್ ಅನ್ನು ಜಾಸ್ಮೀನ್ ತಮ್ಮ ಕುಟುಂಬಸ್ಥರಿಗೆ ಶೇರ್ ಮಾಡಿದ್ದರು. ಅವರ ಸಲಹೆ ಮೇರೆಗೆ ಜಾಸ್ಮಿನ್ ಪೊಲೀಸರಿಗೆ ದೂರು ನೀಡಿದ್ದರು.