Friday, 13th December 2024

ತೆಲಂಗಾಣ ಮುಖ್ಯಮಂತ್ರಿ ಇದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರಿದ್ದ ಹೆಲಿಕಾಪ್ಟರ್‌, ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಹಾರಾಟ ನಡೆಸಿದ ಕೆಲವೇ ಕ್ಷಣಗಳಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಚುನಾವಣಾ ಪ್ರಚಾರಕ್ಕಾಗಿ ತಮ್ಮ ಫಾರ್ಮ್‌ಹೌಸ್‌ನಿಂದ ದೇವರಕಾದ್ರಕ್ಕೆ ಹೊರಟಿದ್ದ ಕೆಸಿಆರ್‌ ಅವರನ್ನು ಹೊತ್ತ ಹೆಲಿಕಾಪ್ಟರ್‌ ಹಾರಾಟ ನಡೆಸಿದ 10 ನಿಮಿಷಗಳಲ್ಲಿ ಮರಳಿ ಮೂಲ ಸ್ಥಾನಕ್ಕೆ ಬಂದಿಳಿದಿದೆ.

ಟೇಕ್‌ಆಫ್‌ ಹಂತದಲ್ಲಿ ಎದುರಾದ ತಾಂತ್ರಿಕ ದೋಷ ಅರಿತ ಪೈಲಟ್‌, ಹಾರಾಟ ಆರಂಭಿಸಿದ ಸ್ಥಳಕ್ಕೆ ಮರಳಲು ನಿರ್ಧರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಲಿಕಾಪ್ಟರ್ ಹಾರಾಟ ನಡೆಸಿದ ಸ್ಥಳಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ. ಚಂದ್ರಶೇಖರ ರಾವ್, ಪೈಲಟ್ ಹಾಗೂ ಸಹ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಮುಖ್ಯಮಂತ್ರಿ ಅವರ ಪ್ರವಾಸಕ್ಕಾಗಿ ವಿಮಾನಯಾನ ಸಂಸ್ಥೆಯು ಬದಲಿ ಹೆಲಿಕಾಪ್ಟರ್‌ ವ್ಯವಸ್ಥೆ ಮಾಡಿದೆ. ಅವರು ತಮ್ಮ ಪೂರ್ವನಿರ್ಧಾರಿತ ರ‍್ಯಾಲಿ ಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಆಪ್ತ ವಲಯ ತಿಳಿಸಿದೆ.