Wednesday, 9th October 2024

ಭಯೋತ್ಪಾದನೆಗೆ ಆರ್ಥಿಕ ನೆರವು: ಜಮ್ಮು-ಕಾಶ್ಮೀರದಲ್ಲಿ ಎನ್‌ಐಎ ಕಾರ್ಯಾಚರಣೆ

ಶ್ರೀನಗರ: ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದ ಪ್ರದೇಶಗಳಲ್ಲಿ ಮಂಗಳವಾರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಪೊಲೀಸರು ಹಾಗೂ ಸಿಆರ್‌ಪಿಎಫ್‌ ಸಿಬ್ಬಂದಿ ಜೊತೆಗೆ ತೆರಳಿದ ಎನ್‌ಐಎ ಅಧಿಕಾರಿಗಳು ಪೂಂಚ್‌, ರಾಜೌರಿ ಮತ್ತು ಕಾಶ್ಮೀರದ ಪುಲ್ವಾಮಾ, ಶೋಪಿ ಯಾನ್‌, ಶ್ರೀನಗರ, ಬುದಗಾಮ್‌, ಬಂಡಿಪೋರಾ ಜಿಲ್ಲೆಗಳಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ್ದಾರೆ.

ಧಾರ್ಮಿಕ ಪ್ರಚಾರಕ ಹಾಗೂ ಮುಖಂಡ ದಾರುಲ್‌-ಉಲ್‌-ಉಲೂಮ್‌ ರಹೀಮಿಯಾ, ಮೌಲಾನಾ ರೆಹಮ ತುಲ್ಲಾ ಖಾಸ್ಮಿ ಮತ್ತು ಎನ್‌ಐಟಿ ಶ್ರೀನಗರದ ಪ್ರಾಧ್ಯಾಪಕ ಸಮಮ್‌ ಅಹ್ಮದ್‌ ಲೋನೆ ಸೇರಿದಂತೆ ಹಲವರ ನಿವಾಸಗಳಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಗ್ರರಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಲಾಗುತ್ತಿದೆ ಎಂದೂ ಹೇಳಿದ್ದಾರೆ.

ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್‌ಐಎ, ಜಮ್ಮು ಮತ್ತು ಕಾಶ್ಮೀರದಲ್ಲಿ 2017ರಿಂದ ನಿರಂತರವಾಗಿ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.