Friday, 13th December 2024

ತ್ರಿಪುರಾ ಸಿಎಂ ಹತ್ಯೆ ಯತ್ನ: ಮೂರು ಮಂದಿ ಬಂಧನ

ಅಗರ್ತಲ: ತ್ರಿಪುರಾ ಸಿಎಂ ಬಿಪ್ಲಬ್ ದೇವ್ ಅವರ ಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.

ಶ್ಯಾಮಪ್ರಸಾದ್ ಮುಖರ್ಜಿ ಅವರಿದ್ದ ಅಧಿಕೃತ ನಿವಾಸದ ಬಳಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಬಿಪ್ಲಬ್ ದೇವ್ ಅವರ ಭದ್ರತಾ ವಲಯದ ಮೂಲಕ ಕಾರು ಹಾದು ಹೋಗಿ ಆತಂಕ ಮೂಡಿಸಿತ್ತು. ಡಿಕ್ಕಿ ಹೊಡೆಯಲು ಯತ್ನಿಸಿದ್ದ ವಾಹನದಿಂದ ಪಕ್ಕಕ್ಕೆ ಸರಿದು ಬಿಪ್ಲಬ್ ದೇವ್ ಅಪಾಯದಿಂದ ಪಾರಾಗಿದ್ದರು.

ಆದರೆ ಭದ್ರತಾ ಸಿಬ್ಬಂದಿಗಳ ಪೈಕಿ ಓರ್ವ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಕಾರನ್ನು ತಡೆಯಲು ಸಿಎಂ ಭದ್ರತಾ ಸಿಬ್ಬಂದಿಗಳು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಬಳಿಕ ಕೆರ್ಚೌಮುಹನಿಯಿಂದ ಮೂವರನ್ನು ಬಂಧಿಸಲಾಗಿದ್ದು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಮ್ಯಾಜಿಸ್ಟ್ರೇಟ್ ಪಿಪಿ ಪೌಲ್ ಎದುರು ಆರೋಪಿ ಗಳನ್ನು ಹಾಜರುಪಡಿಸಲಾಗಿದ್ದು, 14 ದಿನಗಳ ವಶಕ್ಕೆ ನೀಡಲಾಗಿದೆ.

ಆರೋಪಿಗಳು 20 ವರ್ಷದ ವಯಸ್ಸಿನವರಾಗಿದ್ದು, ಹತ್ಯೆ ಯತ್ನದ ಕಾರಣ ಇನ್ನಷ್ಟೇ ತಿಳಿಯ ಬೇಕಿದೆ, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.