Thursday, 3rd October 2024

ಮೂರು ವಿವಾದಾತ್ಮಕ ಕೃಷಿ ಕಾನೂನು ಹಿಂಪಡೆದ ಮೋದಿ ಸರ್ಕಾರ

ನವದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಘೋಷಿಸಿದರು.

ಕಳೆದೊಂದು ವರ್ಷದಿಂದ ಕೃಷಿ ಕಾನೂನನ್ನು ವಿರೋಧಿಸಿ, ದೇಶದಾದ್ಯಂತ ಬೃಹತ್ ರೈತ ಪ್ರತಿಭಟನೆ ನಡೆದಿತ್ತು.

ಈ ಮಹತ್ವದ ನಿರ್ಧಾರವನ್ನು ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ ಜನ್ಮ ದಿನವನ್ನು ಆಚರಿಸುವ ಗುರುಪುರಬ್ ಹಬ್ಬದಂದು ಈ ಘೋಷಣೆ ಮಾಡಲಾಗಿದೆ.

ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿಯೇ 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ರೈತರ ಒಂದು ವರ್ಗವನ್ನು ಮನವರಿಕೆ ಮಾಡಲು ಸರ್ಕಾರ ವಿಫಲವಾಗಿದೆ.

ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಲು ಕೇಂದ್ರ, ಕೃಷಿ ತಜ್ಞರು ಮತ್ತು ರೈತರನ್ನೊಳಗೊಂಡ ಸಮಿತಿ ಯನ್ನು ಸರ್ಕಾರ ರಚಿಸಿದೆ ಎಂದು ಹೇಳಿದರು.

“ಒಳ್ಳೆಯ ಕೆಲಸ ಮಾಡುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ. ನಾನು ಮಾಡಿದ್ದು ದೇಶಕ್ಕಾಗಿ, ನಾನು ಮಾಡುವುದೇ ನನ್ನ ದೇಶಕ್ಕಾಗಿ. ನನ್ನನ್ನು ನಂಬಿರಿ, ನಿಮ್ಮ ಕನಸುಗಳು ನನಸಾಗಲು ನಾನು ಹೆಚ್ಚು ಕೆಲಸ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು, ಅವರು ಬೆಳೆ ಮಾದರಿಯನ್ನು ಬದಲಾಯಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಶುಕ್ರವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೃಷಿ ಕ್ಷೇತ್ರಕ್ಕೆ ಸರ್ಕಾರ ನೀಡಿರುವ ಅನುದಾನಗಳ ಕುರಿತಾಗಿ ವಿವರ ನೀಡಿದರು. ಆ ಬಳಿಕ ಸರ್ಕಾರವು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರ್ಧರಿಸಿರುವ ಕುರಿತು ಮಾಹಿತಿ ನೀಡಿದರು.

“ಶ್ರೀ ಗುರು ನಾನಕ್ ದೇವ್ ಅವರ ಪ್ರಕಾಶ್ ಪೂರಬ್ ದಿನದಂದು, ಎಲ್ಲ ಪ್ರತಿಭಟನಾ ನಿರತ ರೈತರು ತಮ್ಮ ಮನೆಗಳಿಗೆ ತೆರಳಬೇಕಾಗಿ ವಿನಂತಿಸುತ್ತೇನೆ,” ಎಂದು ಹೇಳಿದರು.