Monday, 14th October 2024

Tirupati Temple Laddu : ಸನಾತನ ಧರ್ಮ ರಕ್ಷಣಾ ಮಂಡಳಿ ಸ್ಥಾಪನೆಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಒತ್ತಾಯ

Tirupati Temple Laddu

ಅಮರಾವತಿ: ದೇಶಾದ್ಯಂತ ದೇವಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಸನಾತನ ಧರ್ಮ ರಕ್ಷಣಾ ಮಂಡಳಿ ರಚಿಸುವಂತೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಶುಕ್ರವಾರ ಆಗ್ರಹಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ನಲ್ಲಿ, ತಿರುಪತಿಯಲ್ಲಿ ನಡೆಯುತ್ತಿರುವ ಲಡ್ಡು ವಿವಾದದ (Tirupati Temple Laddu) ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು ಹೊಸ ಪ್ರಸ್ತಾಪ ಮಾಡಿದ್ದಾರೆ. ದೇವಾಲಯಗಳ ಅಪವಿತ್ರಗೊಳಿಸುವುದು, ಭೂ ವ್ಯಾಜ್ಯಗಳು ಮತ್ತು ಇತರ ಧಾರ್ಮಿಕ ಆಚರಣೆಗಳ” ಸುತ್ತಲಿನ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಮಂಡಳಿ ರಚನೆ ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ತಿರುಪತಿ ಬಾಲಾಜಿ ದೇವಸ್ಥಾನದ ಪ್ರಸಾದಲ್ಲಿ ಪ್ರಾಣಿಗಳ ಕೊಬ್ಬು (ಮೀನಿನ ಎಣ್ಣೆ, ಹಂದಿ ಮಾಂಸದ ಕೊಬ್ಬು ಮತ್ತು ಗೋಮಾಂಸ ಕೊಬ್ಬು) ಮಿಶ್ರಣವಾಗಿದೆ ಎಂಬ ಪ್ರಯೋಗಾಲಯದ ವರದಿ ಬಗ್ಗೆ ನಾವೆಲ್ಲರೂ ತೀವ್ರವಾಗಿ ವಿಚಲಿತರಾಗಿದ್ದೇವೆ. ಆಗಿನ ವೈಎಸ್‌ಆರ್‌ಪಿ ಸರ್ಕಾರ ರಚಿಸಿದ ಟಿಟಿಡಿ ಮಂಡಳಿಯು ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಸಾಧ್ಯವಾದಷ್ಟು ಕಠಿಣ ಕ್ರಮ ತೆಗೆದುಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ” ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇಡೀ ಭಾರತದಲ್ಲಿ ದೇವಾಲಯಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಲು ರಾಷ್ಟ್ರೀಯ ಮಟ್ಟದಲ್ಲಿ ‘ಸನಾತನ ಧರ್ಮ ರಕ್ಷಣಾ ಮಂಡಳಿ’ ರಚಿಸುವ ಸಮಯ ಬಂದಿದೆ” ಎಂದು ಕಲ್ಯಾಣ್ ಹೇಳಿದ್ದಾರೆ.

ಇದನ್ನೂ ಓದಿ: Tirupati Laddoo: ತಿರುಪತಿ ಲಡ್ಡು ಪ್ರಸಾದ ವಿವಾದ; ವರದಿ ಕೇಳಿದ ಕೇಂದ್ರ ಸರ್ಕಾರ

ಈ ವಿಷಯದ ಬಗ್ಗೆ ರಾಷ್ಟ್ರಮಟ್ಟದ ಚರ್ಚೆಗೆ ಕರೆ ನೀಡಿದ ಉಪ ಮುಖ್ಯಮಂತ್ರಿ ಕಲ್ಯಾಣ್‌ ” ಸನಾತನ ಧರ್ಮಕ್ಕೆ ಹಾಣಿಗೊಳಿಸುವುದರ ವಿರುದ್ಧ ಸಾಮೂಹಿಕ ಹೋರಾಟ” ನಡೆಸಬೇಕು ಎಂದು ಹೇಳಿದರು.

ರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಪರಿಣತರು , ಧಾರ್ಮಿಕ ಮುಖ್ಯಸ್ಥರು, ನ್ಯಾಯಾಂಗ, ನಾಗರಿಕರು, ಮಾಧ್ಯಮಗಳು ಈ ಬಗ್ಗೆ ಚರ್ಚೆ ನಡೆಸಬೇಕು. ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ತಪ್ಪಿಸಲು ನಾವೆಲ್ಲರೂ ಒಗ್ಗೂಡಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಗುರುವಾರ, ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಈ ಹಿಂದೆ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಪ್ರಸಾದದಲ್ಲಿ ದನದ ಕೊಬ್ಬು ಬಳಸಿದ್ದಾರೆ ಎಂದು ಆರೋಪಿಸಿದ್ದರು.