Wednesday, 11th December 2024

ಇಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ

ನವದೆಹಲಿ: ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಹಲವಾರು ಕೇಂದ್ರ ಕಾರ್ಮಿಕ ಸಂಘಗಳು ಗುರುವಾರ (ನವೆಂಬರ್ 26) ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ.

10 ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯಿಂದ ಕರೆ ನೀಡಿರುವ ದೇಶವ್ಯಾಪಿ ಮುಷ್ಕರದಲ್ಲಿ 25 ಕೋಟಿ ಕಾರ್ಮಿಕರು ಭಾಗವಹಿಸುವ ಸಾಧ್ಯತೆಯಿದೆ.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವೂ ಒಂದು ದಿನದ ಮುಷ್ಕರದಲ್ಲಿ ಕಾರ್ಮಿಕ ಸಂಘಗಳ ಜೊತೆ ಕೈಜೋಡಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೆ 200 ದಿನಗಳ ಕೆಲಸವನ್ನು ವರ್ಧಿತ ವೇತನದಲ್ಲಿ ಒದಗಿಸಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಿಸಲು ಒಕ್ಕೂಟಗಳು ಆಗ್ರಹಿಸಿವೆ.

ರೈತ ವಿರೋಧಿ ಕಾನೂನುಗಳು ಮತ್ತು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಮತ್ತು ಹಣಕಾಸು ವಲಯ ಸೇರಿದಂತೆ ಸಾರ್ವಜನಿಕ ವಲಯದ ಖಾಸಗೀಕರಣವನ್ನು ನಿಲ್ಲಿಸಲು ಮತ್ತು ರೈಲ್ವೆ, ಕಾರ್ಖಾನೆಗಳು, ಬಂದರುಗಳಂತಹ ಸರ್ಕಾರಿ-ಉತ್ಪಾದನಾ ಮತ್ತು ಸೇವಾ ಸಂಸ್ಥೆಗಳ ಸಾಂಸ್ಥಿಕೀಕರಣವನ್ನು ನಿಲ್ಲಿಸುವಂತೆ ಕಾರ್ಮಿಕ ಸಂಘಗಳು ಸರ್ಕಾರವನ್ನು ಒತ್ತಾಯಿಸಿವೆ.

ಮುಷ್ಕರದಲ್ಲಿ ಭಾಗಿಯಾಗಲಿರುವ ಸಂಘಟನೆಗಳು:

ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್(ಐಎನ್‌ಟಿಯುಸಿ), ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಹಿಂದ್ ಮಜ್ದೂರ್ ಸಭಾ(ಹೆಚ್‌ಎಂಎಸ್), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಟಿಯುಸಿ), ಟ್ರೇಡ್ ಯೂನಿಯನ್ ಕೋ- ಆರ್ಡಿನೇಷನ್ ಸೆಂಟರ್ (ಟಿಯುಸಿಸಿ), ಸ್ವಯಂ ಉದ್ಯೋಗಿ ಮಹಿಳಾ ಸಂಘ(ಸೆವಾ), ಅಖಿಲ ಭಾರತ ಕೇಂದ್ರ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್(ಎಐಸಿಸಿಟಿಯು), ಕಾರ್ಮಿಕ ಪ್ರಗತಿಪರ ಒಕ್ಕೂಟ(ಎಲ್ಪಿಎಫ್) ಮತ್ತು ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಯುಟಿಯುಸಿ). ಜಂಟಿ ವೇದಿಕೆಯು ಸ್ವತಂತ್ರ ಒಕ್ಕೂಟಗಳು / ಸಂಘಗಳನ್ನು ಸಹ ಒಳಗೊಂಡಿದೆ.

ಯೋಜನಾ ಕಾರ್ಮಿಕರು, ಗೃಹ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಬೀಡಿ ಕಾರ್ಮಿಕರು, ವ್ಯಾಪಾರಿಗಳು, ಮಾರಾಟಗಾರರು, ಕೃಷಿ ಕಾರ್ಮಿಕರು, ಗ್ರಾಮೀಣ ಮತ್ತು ನಗರ ಭಾರತದಲ್ಲಿ ಸ್ವಯಂ ಉದ್ಯೋಗಿಗಳು ಸಹ ಬೀದಿಗಿಳಿಯಲು ನಿರ್ಧರಿಸಿದ್ದಾರೆ. ಅನೇಕ ರಾಜ್ಯಗಳಲ್ಲಿ, ಆಟೋ ಮತ್ತು ಟ್ಯಾಕ್ಸಿ ಚಾಲಕರು ಸಹ ರಸ್ತೆಗಳಿಂದ ದೂರವಿರಲು ನಿರ್ಧರಿಸಿದ್ದಾರೆ.

ಭಾರತದ ಕಿಸಾನ್ ಸಂಘಟನೆಗಳ ಯುನೈಟೆಡ್ ಫ್ರಂಟ್ ಕಾರ್ಮಿಕರ ಸಾಮಾನ್ಯ ಮುಷ್ಕರಕ್ಕೆ ತನ್ನ ಬೆಂಬಲ ನೀಡಿದೆ. ಗ್ರಾಮೀಣ ಭಾರತದಲ್ಲಿಯೂ ಮುಷ್ಕರ ಯಶಸ್ಸಿಗೆ ಒತ್ತು ನೀಡಲಾಗಿದೆ. ಕೃಷಿ ಕಾನೂನುಗಳ ವಿರುದ್ಧದ ಹೋರಾಟಕ್ಕೆ ಕಾರ್ಮಿಕರು ಕೈಜೋಡಿಸಿದ್ದಾರೆ. ನವೆಂಬರ್ 26-27 ರ ‘ಪಾರ್ಲಿಮೆಂಟ್ ಚಲೋ’ ಮೆರವಣಿಗೆ ನಡೆಸಲು ಭಾರತೀಯ ರೈತರ ಸಂಘಟನೆಯಾದ ಎಐಕೆಎಸ್ಸಿಸಿಯ ಕರೆ ನೀಡಿದ್ದು ಕಾರ್ಮಿಕ ಸಂಘಗಳು ಬೆಂಬಲವನ್ನು ನೀಡಿವೆ.