Wednesday, 11th December 2024

Swachh Bharat Mission : ವರ್ಷಕ್ಕೆ 70 ಸಾವಿರ ಶಿಶುಗಳ ಮರಣ ತಪ್ಪಿಸುತ್ತಿದೆ ಸ್ವಚ್ಛ ಭಾರತ ಅಭಿಯಾನ

Swachh Bharat Mission

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ವಚ್ಛ ಭಾರತ್ ಮಿಷನ್ (Swachh Bharat Mission) ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಶೌಚಾಲಯಗಳು ಪ್ರತಿವರ್ಷ 60,000-70,000 ಶಿಶುಗಳ ಮರಣವನ್ನು ತಪ್ಪಿಸುತ್ತಿದೆ ಎಂದು ಅಧ್ಯಯನವೊಂದು ವರದಿ ಮಾಡಿದೆ. 2000 ರಿಂದ 2020ರವರೆಗೆ ಅವಧಿಯಲ್ಲಿ ಐದು ವರ್ಷಕ್ಕಿಂತ ಮಕ್ಕಳ ಸಾವಿನ ಪ್ರಮಾಣವನ್ನು ಅಧ್ಯಯನ ಮಾಡಿದ ಬಳಿಕ ಈ ಸತ್ಯ ಗೊತ್ತಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ನಿರ್ಮಿಸಲಾದ ಶೌಚಾಲಯಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಮಕ್ಕಳಲ್ಲಿ ಸಾವಿನ ಪ್ರಮಾಣ ಇಳಿಕೆಯಾಗಿದೆ ಎಂದು ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್ಸ್‌ನ ವರದಿ ಹೇಳಿದೆ.

ಅಮೆರಿಕದ ಇಂಟರ್‌ನ್ಯಾಷನಲ್‌ ಫುಡ್ ಪಾಲಿಸಿ ರಿಸರ್ಚ್ ಇನ್ಸ್‌ಟಿಟ್ಯೂಟ್‌ನ ಸಂಶೋಧಕರು, 20 ವರ್ಷಗಳಲ್ಲಿ 35 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು 600 ಕ್ಕೂ ಹೆಚ್ಚು ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಪ್ರತಿನಿಧಿ ಸಮೀಕ್ಷೆಗಳ ಡೇಟಾವನ್ನು ಅಧ್ಯಯನ ಮಾಡಿದ ಬಳಿಕ ಈ ವರದಿಯನ್ನು ನೀಡಿದ್ದಾರೆ.

ಈ ವರದಿಗೆ ಶ್ಲಾಘನೆ ವ್ಯಕ್ತಪಡಿಸಿರುವ ಧಾನಿ ನರೇಂದ್ರ ಮೋದಿ, “ಸ್ವಚ್ಛ ಭಾರತ ಅಭಿಯಾನದಂತಹ ಪ್ರಯತ್ನಗಳ ಪರಿಣಾಮವನ್ನು ಎತ್ತಿ ತೋರಿಸುವ ಸಂಶೋಧನೆ ನೋಡಿ ಸಂತೋಷವಾಗಿದೆ. ಸರಿಯಾದ ಶೌಚಾಲಯಗಳ ಲಭ್ಯತೆಯು ಶಿಶುಗಳ ಮರಣವನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸ್ವಚ್ಛ, ಸುರಕ್ಷಿತ ನೈರ್ಮಲ್ಯವು ಸಾರ್ವಜನಿಕ ಆರೋಗ್ಯದ ಪರಿವರ್ತಕ. ಭಾರತ ಈ ವಿಷಯದಲ್ಲಿ ಸಾಧಿಸಿದೆ ಎಂದು ಅವರು ಹೇಳಿದ್ದಾರೆ.

ಅಧ್ಯಯನ ಫಲಿತಾಂಶಗಳೇನು?

ಅಧ್ಯಯನದ ಪ್ರಕಾರ ಜಿಲ್ಲಾ ಮಟ್ಟದ ಶೌಚಾಲಯ ಲಭ್ಯತೆಯಲ್ಲಿ 10% ಅಂಕಗಳಷ್ಟು ಹೆಚ್ಚಾಗಿದ್ದರೆ, ಶಿಶುಗಳಲ್ಲಿ ಸಾವಿನ ಪ್ರಮಾಣವನ್ನು 0.9 ಪಾಯಿಂಟ್‌ಗಳು ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಪ್ರಮಾಣ 1.1 ಪಾಯಿಂಟ್‌ ಕಡಿಮೆಯಾಗಿದೆ. ಶೌಚಾಲಯದ ಲಭ್ಯತೆ ಮತ್ತು ಮಕ್ಕಳಲ್ಲಿನ ಸಾವುಗಳು ಭಾರತದಲ್ಲಿ ಸಂಬಂಧವನ್ನು ಹೊಂದಿವೆ ಎಂದು ಅಧ್ಯಯನದ ಲೇಖಕರು ಉಲ್ಲೇಖಿಸಿದ್ದಾರೆ. ವಾರ್ಷಿಕವಾಗಿ ಅಂದಾಜು 60,000-70,000 ಶಿಶುಗಳ ಜೀವನ ಉಳಿದಿದೆ ಎಂದು ವರದಿ ಹೇಳಿದೆ.

ಅಧ್ಯಯನದ ಪ್ರಕಾರ, ಸಮಗ್ರ ರಾಷ್ಟ್ರೀಯ ನೈರ್ಮಲ್ಯ ಕಾರ್ಯಕ್ರಮದ ನಂತರ ಶಿಶು ಮತ್ತು ಶಿಶು ಮರಣದಲ್ಲಿ ಇಳಿಕೆಗೆ ಸಾಕಷ್ಟು ಸಾಕ್ಷ್ಯಗಳಿವೆ. ಸಂಶೋಧನೆಗಳು ಜಾಗತಿಕ ಮತ್ತು ದಕ್ಷಿಣ ಏಷ್ಯಾದ ಸಂದರ್ಭಗಳ ಪುರಾವೆಗಳಿಗೆ ಅನುಗುಣವಾಗಿವೆ. ಸಮೀಕ್ಷೆಗಳ ಮೂಲಕ ಸಂಗ್ರಹಿಸಿದ ಜನಸಂಖ್ಯೆ ಮಟ್ಟದ ಡೇಟಾವನ್ನು ವಿಶ್ಲೇಷಿಸಿದ ಅನೇಕ ಅಧ್ಯಯನಗಳು, ನೈರ್ಮಲ್ಯವು ಶಿಶು ಮರಣ ಪ್ರಮಾಣವನ್ನು ಶೇಕಡಾ 5-30 ರಷ್ಟು ಕಡಿಮೆ ಮಾಡುತ್ತದೆ ಎಂದು ಸೂಚಿಸಿದೆ” ಎಂದು ಸಂಶೋಧನಾ ವರದಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ : Bank frauds: ಎಸ್‌ಬಿಐ, ಪಿಎನ್‌ಬಿ ಮೇಲಿನ ನಿಷೇಧ ವಾಪಸ್‌ ಪಡೆಯಲು ರಾಜ್ಯ ಸರ್ಕಾರ ನಿರ್ಧಾರ

ಇತ್ತೀಚಿನ ಅಧ್ಯಯನಗಳು ಮಹಿಳೆಯರ ಸುರಕ್ಷತೆ, ಕಡಿಮೆ ವೈದ್ಯಕೀಯ ವೆಚ್ಚಗಳಿಂದಾಗಿ ಆರ್ಥಿಕ ಉಳಿತಾಯ ಮತ್ತು ಒಟ್ಟಾರೆ ಸುಧಾರಿತ ಜೀವನ ಗುಣಮಟ್ಟ ಸೇರಿದಂತೆ ಶೌಚಾಲಯಗಳಿಂದ ಹೆಚ್ಚಿನ ಪ್ರಯೋಜನಗಳು ಇವೆ ಎಂಬುದನ್ನು ಎತ್ತಿ ತೋರಿಸುತ್ತದೆ. ಜಾತಿ ಮತ್ತು ಧರ್ಮ ಆಧಾರಿತ ತಾರತಮ್ಯಗಳಿಂದಾಗಿಯೂ ಶೌಚಾಲಯಗಳನ್ನು ಕಟ್ಟುವಲ್ಲಿ ಅಸಮಾನತೆಗಳಿವೆ ಎಂದು ವರದಿಯು ಗಮನಸೆಳೆದಿದೆ.

ಈ ಅಭ್ಯಾಸಗಳು ಸ್ವಚ್ಛ ಭಾರತ ಅಭಿಯಾನದ ಪರಿಣಾಮಕಾರಿ ಮತ್ತು ಸಮಾನ ಅನುಷ್ಠಾನಕ್ಕೆ ಸವಾಲುಗಳನ್ನು ಒಡ್ಡುತ್ತವೆ ಮತ್ತು ನೈರ್ಮಲ್ಯ-ಸಂಬಂಧಿತ ನಡವಳಿಕೆ ಬದಲಾವಣೆಯ ದೀರ್ಘಕಾಲೀನ ಸುಸ್ಥಿರತೆಯ ಬಗ್ಗೆ ಕಾನೂನುಬದ್ಧ ಕಳವಳಗಳನ್ನು ಹುಟ್ಟುಹಾಕುತ್ತವೆ” ಎಂದು ಸಂಶೋಧಕರು ಬರೆದಿದ್ದಾರೆ.