Friday, 13th December 2024

ಜಮ್ಮು-ಕಾಶ್ಮೀರದ ಎರಡು ಮುಸ್ಲಿಂ ಸಂಘಟನೆಗಳ ಮೇಲೆ ಐದು ವರ್ಷ ನಿಷೇಧ

ನವದೆಹಲಿ: ಜಮ್ಮು-ಕಾಶ್ಮೀರದ ಎರಡು ಮುಸ್ಲಿಂ ಸಂಘಟನೆಗಳ ಮೇಲೆ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿಯಲ್ಲಿ ಐದು ವರ್ಷಗಳ ಕಾಲ ನಿಷೇಧ ಹೇರಲಾಗಿದೆ.

ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ(ಮಸರತ್ ಆಲಂ ಬಣ) ಮತ್ತು ತೆಹ್ರೀಕ್-ಎ-ಹುರಿಯತ್ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರುವಂತೆ ವಾದ ಮಂಡಿಸಿತ್ತು. ಇದೀಗ ಇದನ್ನು ಯುಎಪಿಎ ನ್ಯಾಯಮಂಡಳಿ ಎತ್ತಿ ಹಿಡಿದಿದೆ.

ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಈ ಸಂಘಟನೆಗಳ ಮೇಲೆ ನಿಷೇಧ ಹೇರಲು ಸಾಕಷ್ಟು ಕಾರಣವಿದೆಯೇ ಎಂದು ನಿರ್ಣಯಿಸಲು ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸಚಿನ್ ದತ್ತಾ ಅವರ ಏಕಸದಸ್ಯ ನ್ಯಾಯಮಂಡಳಿಯನ್ನು ಜನವರಿಯಲ್ಲಿ ರಚಿಸಲಾಗಿತ್ತು. ಕಣಿವೆ ರಾಜ್ಯದಲ್ಲಿ ಈ ಎರಡು ಸಂಘಟನೆಗಳು ಪ್ರತ್ಯೇಕತಾವಾದಿ ಹಾಗೂ ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಖಚಿತವಾಗಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಪರವಾಗಿ ಈ ಸಂಘಟನೆ ಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಕಣಿವೆಯಲ್ಲಿ ಉಗ್ರಗಾಮಿ ಕಾರ್ಯಾಚರಣೆಗಳನ್ನು ನಡೆಸಲು ಬೆಂಬಲವನ್ನು ನಿರಂತರವಾಗಿ ನೀಡುತ್ತಿವೆ ಎಂಬ ಕೇಂದ್ರದ ವಾದವನ್ನು ನ್ಯಾಯಮಂಡಳಿ ಎತ್ತಿಹಿಡಿದಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಮತ್ತು ವಕೀಲ ರಜತ್ ನಾಯರ್ ಅವರು ನ್ಯಾಯಮಂಡಳಿಯ ಮುಂದೆ ಸರ್ಕಾರವನ್ನು ಪ್ರತಿನಿಧಿಸಿ ದರು. ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ (ಮಸರತ್ ಆಲಂ ಬಣ) ಕೇಂದ್ರಾಡಳಿತ ಪ್ರದೇಶದಲ್ಲಿ ರಾಷ್ಟ್ರವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆ ಗಳಲ್ಲಿ ಭಾಗಿಯಾಗಿರುವ ಕಾರಣಕ್ಕಾಗಿ 2023 ರ ಡಿಸೆಂಬರ್ 27 ರಂದು ಯುಎಪಿಎ ಅಡಿಯಲ್ಲಿ ಸರ್ಕಾರವು ಐದು ವರ್ಷಗಳ ಕಾಲ ಕಾನೂನುಬಾಹಿರ ಎಂದು ಘೋಷಿಸಿತು.