ನವದೆಹಲಿ: ದಕ್ಷಿಣ ಭಾರತದ ಖ್ಯಾತ ದೇಗುಲಗಳೊಂದಾದ ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನ(Guruvayur Sri Krishna temple)ದಲ್ಲಿ ಉದಯಾಸ್ತಮಾನ ಪೂಜೆ(Udayasthamana Pooja)ಯನ್ನು ಸ್ಥಗಿತಗೊಳಿಸಿದ ಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್(Supreme Court) ನೊಟೀಸ್ ಜಾರಿಗೊಳಿಸಿದೆ. ಏಕಾದಶಿ ದಿನದಂದು ನಡೆಸಲಾಗುವ ಉದಯಾಸ್ತಮಾನ ಪೂಜೆಯನ್ನು ದೇಗುಲ ಸ್ಥಗಿತಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಕ್ಕೆ ಸುಪ್ರೀಂ ಕೋರ್ಟ್ ಒಪ್ಪಿದೆ.
ನ್ಯಾಯಮೂರ್ತಿಗಳಾದ ಜೆ ಕೆ ಮಾಹೇಶ್ವರಿ ಮತ್ತು ರಾಜೇಶ್ ಬಿಂದಾಲ್ ಅವರ ಪೀಠವು ಈ ಪ್ರಕರಣದಲ್ಲಿ ಗುರುವಾಯೂರು ದೇವಸ್ವಂ ಆಡಳಿತ ಮಂಡಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಏಕಾದಶಿ ದಿನದಂದೇ ವಿಚಾರಣೆ ನಡೆಯುತ್ತಿದ್ದು, ಮಂಗಳವಾರ ಸಂಜೆಯಿಂದಲೇ ಪೂಜೆ ಆರಂಭವಾಗಬೇಕಿದ್ದ ಕಾರಣ ಈ ಬಾರಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಪೀಠ ವಿಷಾದ ವ್ಯಕ್ತಪಡಿಸಿತು. ದೇವಾಲಯದ ವೆಬ್‌ಸೈಟ್‌ನಲ್ಲಿಯೇ ಪೂಜೆಯ ಮಹತ್ವವನ್ನು ಉಲ್ಲೇಖಿಸಲಾಗಿದೆ ಮತ್ತು ಅದನ್ನು ಎಚ್ಚರಿಕೆಯಿಂದ ಅನುಸರಿಸಲು ಆಡಳಿತ ಮಂಡಳಿಗೆ ಸೂಚಿಸಿದೆ.
ಏನಿದು ಉದಯಾಸ್ತಮಾನ ಪೂಜೆ?
ಉದಯಸ್ತಮಾನ ಪೂಜೆಯು ಸೂರ್ಯೋದಯದಿಂದ (ಉದಯ) ಸೂರ್ಯಾಸ್ತದವರೆಗೆ (ಅಸ್ತಮಾನ) ದಿನವಿಡೀ ದೇವಾಲಯಗಳಲ್ಲಿ ನಡೆಸುವ ಪೂಜಾ ವಿಧಿಗಳ ಸರಣಿಯಾಗಿದೆ. ಗುರುವಾಯೂರು ದೇವಸ್ಥಾನದ ಆಡಳಿತ ಮಂಡಳಿಯು ಏಕಾದಶಿಯಂದು ಆಚರಣೆಯನ್ನು ನಿಲ್ಲಿಸಲು ನಿರ್ಧರಿಸಿದೆ. ಜನದಟ್ಟಣೆ ನಿವಾರಣೆ ಮತ್ತು ಹೆಚ್ಚಿನ ಭಕ್ತಾಧಿಗಳಿಗೆ ದರ್ಶನ ಸುಗಮ ಮಾಡಿಕೊಡುವ ನಿಟ್ಟಿನಲ್ಲಿಈ ನಿರ್ಧಾರಕ್ಕೆ ಬರಲಾಗಿದೆ.
ಇದನ್ನು ಪ್ರಶ್ನಿಸಿ ದೇವಾಲಯದಲ್ಲಿ ಅರ್ಚಕ ಹಕ್ಕು ಹೊಂದಿರುವ ಕುಟುಂಬಗಳ ಇತರ ಸದಸ್ಯರು ಕೋರ್ಟ್ ಮೆಟ್ಟಿಲೇರಿದ್ದರು. ಏಕಾದಶಿ ಅತ್ಯಂತ ಪ್ರಮುಖ ಹಬ್ಬವಾಗಿದೆ ಮತ್ತು ಕನಿಷ್ಠ 1972 ರಿಂದ ಈ ದಿನದಂದು ಉದಯಾಸ್ತಮಾನ ಪೂಜೆಯನ್ನು ನಡೆಸಲಾಗುತ್ತಿದೆ. ಇದೀಗ ಏಕಾಏಕಿ ಆ ಆಚರಣೆಯನ್ನು ಕೈಬಿಡುವುದು ಸರಿಯಾದ ಕ್ರಮವಲ್ಲ ಎಂದು ವಾದಿಸಿದರು.
ಈ ಸುದ್ದಿಯನ್ನೂ ಓದಿ: SSLC Exam: ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆ ಮೌಲ್ಯಮಾಪನ: ರಾಜ್ಯ ಸರ್ಕಾರದ ಮನವಿ ಸುಪ್ರೀಂ ಕೋರ್ಟ್‌ನಿಂದ ವಜಾ