Wednesday, 11th December 2024

Unified Pension Scheme: ಏಕೀಕೃತ ಪಿಂಚಣಿ ಯೋಜನೆಯ ಅಧಿಸೂಚನೆ ಶೀಘ್ರದಲ್ಲೇ ಪ್ರಕಟ

Unified Pension Scheme

ನವದೆಹಲಿ: ಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ನೆರವಾಗುವ ಉದ್ದೇಶದಿಂದ ಇತ್ತೀಚೆಗೆ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಸರ್ಕಾರ ಏಕೀಕೃತ ಪಿಂಚಣಿ ಯೋಜನೆಗೆ (Unified Pension Scheme-UPS) ಅನುಮೋದನೆ ನೀಡಿದೆ. ಈ ಯೋಜನೆಯ ಅಧಿಕೃತ ಅಧಿಸೂಚನೆಯು ಅಕ್ಟೋಬರ್ 15ರೊಳಗೆ ಹೊರ ಬೀಳುವ ಸಾಧ್ಯತೆ ಇದೆ. 2025ರ ಏಪ್ರಿಲ್ 1ರಿಂದ ಈ ಯೋಜನೆಯು ಜಾರಿಯಾಗಲಿದೆ.

ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರ ಮೇಲ್ವಿಚಾರಣೆಯಲ್ಲಿ ಯುಪಿಎಸ್ ನಿಯಮಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ʼದಿ ಎಕನಾಮಿಕ್ ಟೈಮ್ಸ್ʼ ವರದಿ ಮಾಡಿದೆ. ಹೊಸ ಪಿಂಚಣಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಸಚಿವಾಲಯಗಳೊಂದಿಗೆ ನಿಯಮಿತವಾಗಿ ಸಮಾಲೋಚನೆ ನಡೆಸಲಾಗುತ್ತಿದೆ.

ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ (Department of Expenditure) ಯುಪಿಎಸ್‌ನ ಕರಡು ಮತ್ತು ಅಭಿವೃದ್ಧಿಯ ಜವಾಬ್ದಾರಿ ಹೊತ್ತುಕೊಂಡಿದ್ದರೆ, ಇತರ ಇಲಾಖೆಗಳು ವಿವಿಧ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುತ್ತಿವೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (Department of Personnel and Training)ಯು ಕೇಂದ್ರ ಸರ್ಕಾರಿ ನೌಕರರನ್ನು ಹೊಸ ಪಿಂಚಣಿ ಯೋಜನೆ (NPS)ಯಲ್ಲಿ ಉಳಿಸಬೇಕೆ ಅಥವಾ ಯುಪಿಎಸ್‌ಗೆ ಸೇರಿಸಬೇಕೆ ಎನ್ನುವುದನ್ನು ನಿರ್ಧರಿಸಲಿದೆ.

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (Department of Pension and Pensioners’ Welfare) ಯೋಜನೆಯ ಅಂತಿಮ ಕರಡನ್ನು ರೂಪಿಸಲಿದೆ. ಆಡಳಿತ ಸುಧಾರಣಾ ಇಲಾಖೆ (Department of Administrative Reforms) ಸೇವಾ ನಿಯಮಗಳನ್ನು ಪರಿಷ್ಕರಿಸುವ ಕೆಲಸ ಮಾಡುತ್ತಿದೆ. ಇತ್ತ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಪಿಂಚಣಿ ನಿಧಿಗಳ ಹೂಡಿಕೆ ಚೌಕಟ್ಟನ್ನು ಸಿದ್ಧಪಡಿಸುತ್ತಿದೆ. ಹೆಚ್ಚುವರಿಯಾಗಿ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (NSDL) ಯುಪಿಎಸ್ ಅನುಷ್ಠಾನಕ್ಕಾಗಿ ಅಗತ್ಯವಿರುವ ತಾಂತ್ರಿಕ ಅವಶ್ಯಕತೆಗಳ ಮೌಲ್ಯಮಾಪನ ಮಾಡುತ್ತಿದೆ.

ಏನಿದು ಏಕೀಕೃತ ಪಿಂಚಣಿ ಯೋಜನೆ?

ಈ ಯೋಜನೆ ಸರ್ಕಾರಿ ನೌಕರರಿಗೆ ಭವಿಷ್ಯದಲ್ಲಿಆರ್ಥಿಕ ಭದ್ರತೆ ಒದಗಿಸುತ್ತದೆ. ಈ ಯೋಜನೆ ಮೂಲಕ ನಿವೃತಿ ಬಳಿಕ ಸರ್ಕಾರಿ ನೌಕರರಿಗೆ ಸುಭದ್ರ ಜೀವನ ಕಲ್ಪಿಸುವುದು ಕೇಂದ್ರದ ಬಹುದೊಡ್ಡ ಗುರಿ. ಅದರ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿನ ಆರ್ಥಿಕ ಹೊರೆ ತಪ್ಪಿಸುವುದು ಕೂಡ ಈ ಯೋಜನೆಯ ಉದ್ದೇಶ. ಏಕೀಕೃತ ಪಿಂಚಣಿ ಯೋಜನೆಯ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಖಚಿತವಾದ ಪಿಂಚಣಿ, ಕುಟುಂಬ ಪಿಂಚಣಿ, ಕನಿಷ್ಠ ಪಿಂಚಣಿ ಒದಗಿಸಲಾಗುತ್ತದೆ. ಯುಪಿಎಸ್​ ಮೂಲಕ ಶೇ. 50ರಷ್ಟು ಖಚಿತ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ಖಾತರಿಪಡಿಸಲಾಗುತ್ತದೆ.

ನಿವೃತ್ತಿಯ ಕೊನೆಯ 12 ತಿಂಗಳಲ್ಲಿ ಪಡೆದ ಮೂಲ ವೇತನದ (ಬೇಸಿಕ್ ಪೇ) ಶೇ. 50ರಷ್ಟು ಹಣ ಪಿಂಚಣಿಯಾಗಿ ಜಮೆಯಾಗುತ್ತದೆ. 25 ವರ್ಷಗಳ ಕನಿಷ್ಠ ಸೇವೆ ಹೊಂದಿರುವವರು ಈ ಯೋಜನೆಗೆ ಅರ್ಹರು. ನೌಕರನು ನಿವೃತ್ತಿಗೂ ಮುನ್ನ ಮರಣ ಹೊಂದಿದರೆ, ಪಾವತಿಸಬೇಕಾದ ಪಿಂಚಣಿಯ ಶೇ. 60ರಷ್ಟನ್ನು ಕುಟುಂಬಕ್ಕೆ ನೀಡಲಾಗುತ್ತದೆ. ಇತ್ತ ಹಳೆಯ ಪಿಂಚಣಿ ಯೋಜನೆ (OPS)ಗಳಿಂದ ರಾಜ್ಯ ಸರ್ಕಾರಗಳಿಗೆ ಬಹುದೊಡ್ಡ ಮಟ್ಟದಲ್ಲಿ ಹೊರೆಯಾಗುತ್ತದೆ. ಇದನ್ನು ತಪ್ಪಿಸುವುದು ಕೂಡ ಕೇಂದ್ರದ ಪ್ರಮುಖ ಗುರಿ. ಒಟ್ಟಿನಲ್ಲಿ ಯುಪಿಎಸ್ ಹಳೆಯ ಪಿಂಚಣಿ ಯೋಜನೆಗಿಂದ ಸಂಪೂರ್ಣವಾಗಿ ಭಿನ್ನವಾಗಿದೆ.

ಈ ಸುದ್ದಿಯನ್ನೂ ಓದಿ: UPS: ಏಕೀಕೃತ ಪಿಂಚಣಿ ಯೋಜನೆ- ಇದು ಮೋದಿ ಸರ್ಕಾರದ ಕ್ರಾಂತಿಕಾರಕ ನಡೆ!