Sunday, 3rd November 2024

ತಂದೆಯ ನಿಧನದ ನಡುವೆಯೂ ಬಜೆಟ್ ಡ್ಯೂಟಿ ಮುಂದುವರೆಸಿದ ಕರ್ತವ್ಯನಿಷ್ಠ ಅಧಿಕಾರಿ

ಸಾಮಾನ್ಯವಾಗಿ ಅಧಿಕಾರಶಾಹಿ ಹಾಗೂ ವೈಟ್ ಕಾಲರ್‌ ಹುದ್ದೆಗಳಲ್ಲಿ ಇರುವ ಅದೆಷ್ಟೋ ಅಧಿಕಾರಿಗಳ ಆಮೆಗತಿಯ ಕಾರ್ಯವೈಖರಿಗಳನ್ನು ನೋಡಿ-ಕೇಳಿ, ಇದೇ ಟ್ರೆಂಡ್‌ಗೆ ಒಗ್ಗಿಹೋಗಿದ್ದೇವೆ ನಾವು ಭಾರತೀಯರು.

ಆದರೆ, ಇಂಥ ಅಸಹನೀಯ ವಾಸ್ತವದ ನಡವೆಯೂ ಸಹ ಅಲ್ಲಲ್ಲಿ ಕೆಲ ಅಪರೂಪದ ವ್ಯಕ್ತಿತ್ವದ ಕರ್ತವ್ಯ ನಿಷ್ಠ ಅಧಿಕಾರಿಗಳು ಕಾಣಿಸಿಕೊಂಡು, ಸರ್ಕಾರ ಹಾಗೂ ಆಡಳಿತಾತ್ಮಕ ವಲಯಗಳ ಮೇಲೆ ಜನರಿಗೆ ಇನ್ನೂ ಅಷ್ಟೋ ಇಷ್ಟೋ ನಂಬಿಕೆ ಇದೆ ಎನ್ನುವಂಥ ನಿದರ್ಶನಗಳು ಘಟಿಸುತ್ತಲೇ ಇರುತ್ತವೆ.

ಇಂಥದ್ದೇ ಒಂದು ನಿದರ್ಶನದಲ್ಲಿ, ವಿತ್ತ ಸಚಿವಾಲಯದಲ್ಲಿ ಹಿರಿಯ ಅಧಿಕಾರಿ ಆಗಿರು ಕುಲ್ದೀಪ್‌ ಕುಮಾರ್‌ ಶರ್ಮಾ ಎಂಬ ಅಧಿಕಾರಿ ತಮ್ಮ ವೈಯಕ್ತಿಕ ದುಃಖಕ್ಕಿಂತ ದೇಶದ ಪ್ರಗತಿಯ ಪಾಲುದಾರನಾಗಿರಲು ಬಯಸಿದ್ದಾರೆ.

ಹಲ್ವಾ ಸಮಾರಂಭವಾದ ಬಳಿಕ, ಕಳೆದ 10 -12 ದಿನಗಳಿಂದ ಕೇಂದ್ರ ಬಜೆಟ್‌ ಪ್ರತಿಗಳ ಮುದ್ರಣದಲ್ಲಿ ನಿರತರಾಗಿದ್ದ ಕುಮಾರ್‌ಗೆ ಜನವರಿ 26ರಂದು ಪಿತೃವಿಯೋಗವಾಗಿರುವ ಸುದ್ದಿ ಮುಟ್ಟಿದೆ. ವಿತ್ತ ಸಚಿವಾಲಯದ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಾ, ರಾಯ್ಸಿನಾ ಹಿಲ್ಸ್‌ನ ನಾರ್ತ್ ಬ್ಲಾಕ್‌ನಲ್ಲಿ ಕರ್ತವ್ಯ ಬಂಧಿಯಾಗಿದ್ದ ಶರ್ಮಾ, ಬಜೆಟ್ ಸಂಬಂಧ ರಹಸ್ಯ ದಾಖಲೆಗಳ ಮುದ್ರಣದ ತಮ್ಮ ಕಾಯಕವನ್ನು, ವೈಯಕ್ತಿಕವಾಗಿ ಭರಿಸಲಾರದ ನಷ್ಟದ ನಡುವೆಯೂ, ಪಿತೃಶೋಕದ ಭಾವನೆಗಳನ್ನು ಮೀರಿ ನಿಂತು ತಮ್ಮ ಕೆಲಸ ಮುಂದುವರೆಸಿದ್ದಾರೆ.

ಈ ವಿಚಾರವಾಗಿ ಸಂತಾಪ ವ್ಯಕ್ತಪಡಿಸಿದ ವಿತ್ತ ಸಚಿವಾಲಯ, ಕುಮಾರ್‌ ಬಗ್ಗೆ ಹೆಮ್ಮೆಯಿಂದ ಟ್ವೀಟ್ ಮಾಡಿದ್ದು, “ಶ್ರೀ ಕುಲ್ದೀಪ್ ಕುಮಾರ್‌ ಶರ್ಮಾ, ಡೆಪ್ಯೂಟಿ ಮ್ಯಾನೇಜರ್‌(ಮುದ್ರಣ), ಅವರು ಜನವರಿ 26, 2020ರಂದು ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಬಜೆಟ್ ಡ್ಯೂಟಿಯಲ್ಲಿದ್ದ ಅವರು ಲಾಕ್-ಇನ್ ಆಗಿದ್ದರು. ಈ ದೊಡ್ಡ ನಷ್ಟದ ನಡುವೆಯೂ ಸಹ, ಒಂದೇ ಒಂದು ನಿಮಿಷದ ಮಟ್ಟಿಗೆ ಮುದ್ರಣಾಲಯವನ್ನು ಬಿಟ್ಟು ಆಚೆ ಬರಲು ಶರ್ಮಾಗೆ ಇಷ್ಟವಿರಲಿಲ್ಲ,”

“ಶರ್ಮಾ ಅವರು ಬಜೆಟ್ ದಾಖಲೆಗಳ ಮುದ್ರಣದ ಕಾರ್ಯದಲ್ಲಿ 31 ವರ್ಷಗಳ ಅನುಭವಿಯಾಗಿದ್ದು, ಬಿಗಿಯಾದ ವೇಳಾಪಟ್ಟಿಯ ಈ ಪ್ರಕ್ರಿಯೆಯಲ್ಲಿ ಅವರ ಅನುಭವ ಬಹಳ ಮಹತ್ತರವಾದದ್ದು. ವೈಯಕ್ತಿಕ ನಷ್ಟವನ್ನು ಲೆಕ್ಕಕ್ಕೆ ಇಡದ ಶರ್ಮಾ, ಶ್ರೇಷ್ಠ ಮಟ್ಟದ ಕರ್ತವ್ಯ ಬದ್ಧತೆ ತೋರುವ ಮೂಲಕ, ತಮ್ಮ ಕರ್ತವ್ಯ ಕೂಗಿನೆಡೆಗೆ ಉನ್ನತ ಮಟ್ಟದ ಬದ್ಧತೆಯನ್ನು ತೋರಿದ್ದಾರೆ,” ಎಂದು ತಿಳಿಸಿದೆ.