Tuesday, 10th December 2024

Unrest in Bahraich: ದೇವಿ ವಿಗ್ರಹದ ಮೆರವಣಿಗೆ ವೇಳೆ ಕೋಮು ಸಂಘರ್ಷ; ಯುವಕ ಬಲಿ

Unrest in Bahraich

ಲಕ್ನೋ: ಉತ್ತರ ಪ್ರದೇಶದ ಬಹ್ರೈಚ್‌ (Bahraich)ನಲ್ಲಿ ಭಾನುವಾರ (ಅಕ್ಟೋಬರ್‌ 13) ನವರಾತ್ರಿ ಮೆರವಣಿಗೆ ವೇಳೆ ಕೋಮು ಗಲಭೆ ಸಂಭವಿಸಿ 22 ವರ್ಷದ ಯುವಕನೊಬ್ಬ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ. ಹಾಡು ಹಾಕುವ ವಿಚಾರಕ್ಕೆ ಆರಂಭವಾದ ಕೋಮು ಘರ್ಷಣೆ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ (Unrest in Bahraich).

ಕಲ್ಲು ತೂರಾಟ ಮತ್ತು ಗುಂಡಿನ ದಾಳಿಯಿಂದಾಗಿ ಸುಮಾರು 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಿಂಸಾಚಾರವನ್ನು ಖಂಡಿಸಿದ್ದು, ಇದಕ್ಕೆ ಕಾರಣರಾದವರನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ದುರ್ಗಾ ದೇವಿಯ ವಿಗ್ರಹದ ವಿಸರ್ಜನಾ ಮೆರವಣಿಗೆ ಮನ್ಸೂರ್ ಗ್ರಾಮದ ಮಹರಾಜ್ಗಂಜ್ ಬಜಾರ್ ಮೂಲಕ ಹಾದುಹೋದಾಗ ಘರ್ಷಣೆ ನಡೆದಿದೆ.

ರೆಹುವಾ ಮನ್ಸೂರ್ ಗ್ರಾಮದ ನಿವಾಸಿ ರಾಮ್ ಗೋಪಾಲ್ ಮಿಶ್ರಾ ಗುಂಪಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆತನ ಮೇಲೆ ಗುಂಡು ಹಾರಿಸಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಹತ್ಯೆಯ ನಂತರ ಈ ಪ್ರದೇಶದಲ್ಲಿ ಕೋಮು ಉದ್ವಿಗ್ನತೆ ಉಲ್ಬಣಗೊಂಡಿತು. ಬಳಿಕ ಫಖರ್ಪುರ ಪಟ್ಟಣ ಮತ್ತು ಇತರ ಸ್ಥಳಗಳಲ್ಲಿನ ಮೆರವಣಿಗೆಗಳನ್ನು ರದ್ದುಗೊಳಿಸಲಾಯಿತು. ಆದಾಗ್ಯೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಗ್ರಹ ವಿಸರ್ಜನೆಯನ್ನು ಮುಂದುವರಿಸಬೇಕು ಮತ್ತು ಅದು ಸರಿಯಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಧಾರ್ಮಿಕ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಆಡಳಿತಕ್ಕೆ ನಿರ್ದೇಶನ ನೀಡಿದರು.

ವಿಗ್ರಹವನ್ನು ವಿಸರ್ಜಿಸುವ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲು ನಿರ್ದೇಶನ ನೀಡಲಾಯಿತು. ವಿವಿಧ ಗ್ರಾಮಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಬಹ್ರೈಚ್‌ನಲ್ಲಿ ಉಂಟಾದ ಕೋಮು ಗಲಭೆ ಹಿನ್ನೆಲೆಯಲ್ಲಿ ಹಾರ್ಡಿ ಪೊಲೀಸ್ ಠಾಣೆಯ ಮುಖ್ಯಸ್ಥ ಎಸ್.ಕೆ.ವರ್ಮಾ ಮತ್ತು ಮಾಹ್ಸಿ ಹೊರಠಾಣೆಯ ಉಸ್ತುವಾರಿ ಶಿವ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆ ಬಳಿಕ ಗೊಂಡಾ ಮತ್ತು ಬಲರಾಂಪುರ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಘರ್ಷಣೆ ನಡೆದಿದೆ ಎಂದು ಉತ್ತರ ಪ್ರದೇಶ ಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ. ʼʼಪರಿಸ್ಥಿತಿಯನ್ನು ನಿಯಂತ್ರಿಸಲು ಗೋರಖ್ಪುರ ವಲಯದ ಎಡಿಜಿ ಕೆ.ಎಸ್.ಪ್ರತಾಪ್ ಕುಮಾರ್ ಮತ್ತು ದೇವಿಪಟ್ಟಣದ ಡಿಐಜಿ ಅಮರೇಂದ್ರ ಪ್ರತಾಪ್ ಸಿಂಗ್ ಅವರನ್ನೊಳಗೊಂಡ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆʼʼ ಎಂದು ಅವರು ವಿವರಿಸಿದ್ದಾರೆ.

ಬಹ್ರೈಚ್‌ ಉದ್ವಿಗ್ನ

ಈ ಮಧ್ಯೆ ರಾಮ್ ಗೋಪಾಲ್ ಮಿಶ್ರಾ ಅವರ ಸಾವಿನ ಸುದ್ದಿ ಸ್ಥಳೀಯರಲ್ಲಿ ಆಕ್ರೋಶವನ್ನು ಹುಟ್ಟುಹಾಕಿತು. ಮಹಾರಾಜ್ಗಂಜ್ ಮಾರುಕಟ್ಟೆಯಲ್ಲಿ ವಾಹನಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು. ಬಹ್ರೈಚ್ ಎಸ್‌ಪಿ ವೃಂದಾ ಶುಕ್ಲಾ, ಡಿಐಜಿ ಅಮರೇಂದ್ರ ಪ್ರಸಾದ್ ಸಿಂಗ್ ಮತ್ತು ವಿಭಾಗೀಯ ಆಯುಕ್ತ ಶಶಿ ಭೂಷಣ್ ಲಾಲ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಪೊಲೀಸರು ಮತ್ತು ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆ (ಪಿಎಸಿ)ಯ ಭಾರಿ ತುಕಡಿಯನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಈ ಸುದ್ದಿಯನ್ನೂ ಓದಿ: Jammu and Kashmir : ಆರು ವರ್ಷದ ಬಳಿಕ ಜಮ್ಮುಮತ್ತು ಕಾಶ್ಮೀರದಿಂದ ರಾಷ್ಟ್ರಪತಿ ಆಡಳಿತ ಹಿಂದಕ್ಕೆ