Friday, 13th December 2024

ಕರ್ನಾಟಕ ಸೇರಿದಂತೆ ಹತ್ತು ರಾಜ್ಯಗಳ ಮತದಾನದ ಅಪ್’ಡೇಟ್

ನವದೆಹಲಿ: ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳು, 10 ರಾಜ್ಯಗಳ ಒಟ್ಟು 54 ವಿಧಾನಸಭಾ ಕ್ಷೇತ್ರಗಳಲ್ಲಿ ಗುಜರಾತ್, ಮಧ್ಯ ಪ್ರದೇಶ, ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ ಹರ್ಯಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಗುಜರಾತ್ ನ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಪಕ್ಷ ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.

ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ 28 ವಿಧಾನಸಭಾ ಕ್ಷೇತ್ರಗಳ ಪೈಕಿ 6 ರಲ್ಲಿ ಮುನ್ನಡೆ ಪಡೆದಿದೆ. ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಮಧ್ಯ ಪ್ರದೇಶದಲ್ಲಿ ಸರ್ಕಾರ ಉಳಿಸಿಕೊಳ್ಳಲು ಈ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ. ಮಧ್ಯ ಪ್ರದೇಶದಲ್ಲಿ ಮ್ಯಾಜಿಕ್ ನಂಬರ್ 229 ಆಗಿದೆ. ಪ್ರಸ್ತುತ ಬಿಜೆಪಿ ಬಳಿ 107 ಶಾಸಕರ ಬೆಂಬಲವಿದ್ದು, ಕಾಂಗ್ರೆಸ್ 87 ಶಾಸಕರನ್ನು ಹೊಂದಿದೆ.

ಹರ್ಯಾಣದ ಬರಾಡಾದಲ್ಲಿ ಈ ವರೆಗೂ 20 ಸುತ್ತಿನ ಮತಎಣಿಕೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ರಾಜ್ ನರ್ವಾಲ್ ಮುನ್ನಡೆ, ಬಿಜೆಪಿ ಅಭ್ಯರ್ಥಿ ಯೋಗೀಶ್ವರ್ ದತ್ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್ ಶಾಸಕರಾಗಿದ್ದ ಕಿಶನ್ ಹೂಡಾ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ.

ಕರ್ನಾಟಕದ ಆರ್ ಆರ್ ನಗರ ಮತ್ತು ಶಿರಾ ದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಮುನಿರತ್ನ ಮತ್ತು ಸಿಎಂ ರಾಜೇಶ್ ಗೌಡ ಮುನ್ನಡೆ ಸಾಧಿಸಿದ್ದಾರೆ. ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಮುನ್ನಡೆ ಸಾಧಿಸಿದ್ದು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹಿನ್ನಡೆ ಸಾಧಿಸಿದ್ದಾರೆ. ಶಿರಾದಲ್ಲೂ ಬಿಜೆಪಿ ಅಭ್ಯರ್ಥಿ ಸಿಎಂ ರಾಜೇಶ್ ಗೌಡ ಮುನ್ನಡೆ ಸಾಧಿ ಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಮತ್ತು ಜೆಡಿಎಸ್ ಅಮ್ಮಾಜಮ್ಮ ಹಿನ್ನಡೆಯಲ್ಲಿದ್ದಾರೆ. ಶಿರಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದೇ ಆದರೆ ಇಲ್ಲಿ ಮೊದಲ ಬಾರಿಗೆ ಬಿಜೆಪಿ ಜಯಗಳಿಸಿದಂತಾಗುತ್ತದೆ.

ಒಡಿಶಾ, ಜಾರ್ಖಂಡ್ ನಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದ್ದು, ಛತ್ತೀಸ್ ಘಡದ ಮಾರ್ಹಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ನಾಗಾಲ್ಯಾಂಡ್ ನ ದಕ್ಷಿಣ ಅಂಗಾಮಿ ಮತ್ತು ಪುಂಗ್ರೊ ಕಿಫೈರ್ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.