Friday, 13th December 2024

US presidential elections 2024: ಐತಿಹಾಸಿಕ ಗೆಲುವಿಗೆ ಅಭಿನಂದನೆಗಳು ಗೆಳೆಯ…ಟ್ರಂಪ್‌ ವಿಜಯಕ್ಕೆ ಪ್ರಧಾನಿ ಮೋದಿ ಸಂತಸ

pm modi

ವಾಷಿಂಗ್ಟನ್‌: ಅಮೆರಿಕ ಅ‍ಧ್ಯಕ್ಷೀಯ ಚುನಾವಣೆಯಲ್ಲಿ(US presidential elections 2024) ಪ್ರಚಂಡ ಗೆಲುವು ಸಾಧಿಸಿರುವ ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌(Donald Trump) ಅವರಿಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಮೋದಿ, ನಮ್ಮ ಜನರ ಒಳಿತಿಗಾಗಿ ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಕೆಲಸ ಮಾಡೋಣ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಅಮೆರಿಕದ 47ನೇ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸಲು ನರೇಂದ್ರ ಮೋದಿ ಬುಧವಾರ ಟ್ವೀಟ್‌ ಮಾಡಿದ್ದು, “ನಿಮ್ಮ ಐತಿಹಾಸಿಕ ಚುನಾವಣಾ ವಿಜಯಕ್ಕಾಗಿ ನನ್ನ ಸ್ನೇಹಿತ ಡೊನಾಲ್ಡ್‌ ಟ್ರಂಪ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಹಿಂದಿನ ಅವಧಿಯ ಯಶಸ್ಸಿನ ಮೇಲೆ ನೀವು ನಿರ್ಮಿಸುತ್ತಿರುವಂತೆ, ಭಾರತ-ಯುಎಸ್ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಮ್ಮ ಸಹಯೋಗವನ್ನು ನವೀಕರಿಸಲು ನಾನು ಎದುರು ನೋಡುತ್ತಿದ್ದೇನೆ. ಒಟ್ಟಾಗಿ, ನಮ್ಮ ಜನರ ಒಳಿತಿಗಾಗಿ ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಕೆಲಸ ಮಾಡೋಣ ”ಎಂದು ಹೇಳಿದ್ದಾರೆ.

ಬಲವಾದ ರಾಜತಾಂತ್ರಿಕ ಸಂಬಂಧಗಳು, ಕಾರ್ಯತಂತ್ರದ ಸಹಕಾರದ ಮೂಲಕ ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಉತ್ತಮ ಸ್ನೇಹ ಸಂಬಂಧವನ್ನು ಜಗತ್ತಿಗೆ ಸಾರಿದ್ದರು. ಈ ಇಬ್ಬರು ದಿಗ್ಗಜ ನಾಯಕರ ಸ್ನೇಹಕ್ಕೆ 2019 ರಲ್ಲಿ ಹೂಸ್ಟನ್‌ನಲ್ಲಿ ಆಯೋಜಿಸಲಾಗಿದ್ದ “ಹೌಡಿ, ಮೋದಿ!” ಮತ್ತು 2020 ರಲ್ಲಿ ಅಹಮದಾಬಾದ್‌ನಲ್ಲಿ ಏರ್ಪಡಿಸಲಾಗಿದ್ದ “ನಮಸ್ತೆ ಟ್ರಂಪ್” ಕಾರ್ಯಕ್ರಮಗಳು ಸಾಕ್ಷಿಯಾಗಿದ್ದವು. ಅಲ್ಲಿ ಅವರು ಅಪಾರ ಜನಸಮೂಹವನ್ನು ಉದ್ದೇಶಿಸಿ, ಅವರು ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಸುದ್ದಿಯನ್ನೂ ಓದಿ: US presidential elections 2024: ಭಾರತೀಯ ನಟಿ ಅಮೆರಿಕದಲ್ಲಿ ವೋಟಿಂಗ್‌; ನೆಟ್ಟಿಗರು ಫುಲ್‌ ಸರ್ಪ್ರೈಸ್‌!

ಇಡೀ ಪ್ರಪಂಚವೇ ಕಣ್ಣು ನೆಟ್ಟಿದ್ದ ಅಮೆರಿಕ ಚುನಾವಣೆ(US Presidential Election 2024)ಯ ಫಲಿತಾಂಶ ಸ್ಪಷ್ಟವಾಗಿದ್ದು, ಎರಡನೇ ಬಾರಿ ಡೊನಾಲ್ಡ್‌ ಟ್ರಂಪ್‌(Donald Trump) ಗದ್ದುಗೆ ಏರುವುದು ಖಚಿತವಾಗಿದೆ. ಮಂಗಳವಾರದಿಂದ ನಡೆದ ಚುನಾವಣೆಯ ಮತ ಎಣಿಕೆ ಕೊನೆಯ ಹಂತದಲ್ಲಿದ್ದು, ರಿಪಬ್ಲಿಕ್‌ ಪಕ್ಷ ಅಭ್ಯರ್ಥಿಯಾಗಿರುವ ಡೊನಾಲ್ಡ್‌ ಟ್ರಂಪ್‌ ಮ್ಯಾಜಿಕ್‌ ನಂಬರ್‌ 270ರ ಸನಿಹದಲ್ಲಿದ್ದಾರೆ. ಇನ್ನು ಅವರ ಪ್ರತಿಸ್ಪರ್ಧಿ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ 214 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿದೆ.