Wednesday, 11th December 2024

ಉತ್ತರಾಖಂಡದಲ್ಲಿ ಮುಂದಿನ ವಾರ ಏಕರೂಪ ನಾಗರಿಕ ಸಂಹಿತೆ ಜಾರಿ

ನವದೆಹಲಿ: ಉತ್ತರಾಖಂಡ ಮುಂದಿನ ವಾರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರ ಪ್ರಕಾರ ಲಿವ್-‌ ಇನ್‌ ರಿಲೇಶನ್‌ಶಿಪ್‌ ನೋಂದಣಿ ಮಾಡುವುದು ಕಡ್ಡಾಯವಾಗಲಿದೆ.

ನ್ಯಾಯಮೂರ್ತಿ (ನಿವೃತ್ತ) ರಂಜನಾ ದೇಸಾಯಿ ನೇತೃತ್ವದಲ್ಲಿ ರಚಿಸಲಾದ ಸಮಿತಿಯು ಮುಂದಿನ ಎರಡು ದಿನಗಳಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಈ ಕುರಿತು ವರದಿಯನ್ನು ಸಲ್ಲಿಸಲಿದೆ.

ಈ ವರ್ಷದ ಜೂನ್‌ನಲ್ಲಿ, ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಕರಡು ಸಮಿತಿಯ ಸದಸ್ಯರಾದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು ಏಕರೂಪ ನಾಗರಿಕ ಸಂಹಿತೆಯ ಕರಡು ರಚನೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾ ಗುವುದು ಎಂದು ಹೇಳಿದ್ದರು.

ವರದಿಯು ಲಿಂಗ ಸಮಾನತೆ, ಪೂರ್ವಜರ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕುಗಳ ಮೇಲೆ ಒತ್ತು ನೀಡಿದೆ ಎಂದು ತಿಳಿದುಬಂದಿದೆ. ಆದರೆ ಇದು ಮಹಿಳೆಯರ ವಿವಾಹದ ವಯಸ್ಸನ್ನು 21ಕ್ಕೆ ಏರಿಸಲು ಸೂಚಿಸಿಲ್ಲ. ಸಮಿತಿಯ ಶಿಫಾರಸು ಮಹಿಳೆಯರಿಗೆ ಮದುವೆಯ ವಯಸ್ಸನ್ನು 18ಕ್ಕೆ ಉಳಿಸಿಕೊಳ್ಳಬೇಕು ಎಂದು ಹೇಳಿದೆ.

ಉತ್ತರಾಖಂಡದಂತೆ, ಗುಜರಾತ್‌ನಲ್ಲಿ ಕೂಡ 2024ರಲ್ಲಿ ಲೋಕಸಭಾ ಚುನಾವಣೆಯ ಮೊದಲು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಸಾಧ್ಯತೆ ಇದೆ. ನೀತಿ ಜಾರಿಗೆ ತಂದರೆ ಗುಜರಾತ್‌ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆಗೊಳಿಸಿದ 2ನೇ ರಾಜ್ಯವಾಗಲಿದೆ.