ಡೆಹ್ರಾಡೂನ್: ಭೂಕಂಪದ ಮುನ್ನೆಚ್ಚರಿಕೆ ನೀಡುವ ದೇಶದ ಮೊದಲ ಮೊಬೈಲ್ ಅಪ್ಲಿಕೇಶನ್ ‘ಉತ್ತರಾಖಂಡ್ ಭೂಕಂಪ್ ಅಲರ್ಟ್’ ಅನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಬುಧವಾರ ಲೋಕಾರ್ಪಣೆ ಮಾಡಿ ದ್ದಾರೆ.
ಉತ್ತರಾಖಂಡದಲ್ಲಿ ಭೂಕಂಪಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ಮೊಬೈಲ್ ಅಪ್ಲಿಕೇಶನ್ ಲಭ್ಯತೆಯ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಮೊಬೈಲ್ ಆಯಪ್ ಬಿಡುಗಡೆ ಬಳಿಕ ಮುಖ್ಯಮಂತ್ರಿ ಧಾಮಿ ಹೇಳಿದ್ದಾರೆ. ಈ ಯೋಜನೆಯನ್ನು ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಯುಎಸ್‌ಡಿಎಂಎ) ಪ್ರಾಯೋಜಿಸಿದೆ.
ಭೂಕಂಪದ ಎಚ್ಚರಿಕೆಗಳ ಬಗ್ಗೆ ಜನರಿಗೆ ಸೂಚನೆ ನೀಡುವ ದೇಶದ ಮೊದಲ ಅಪ್ಲಿಕೇಶನ್ ಆಗಿರುವುದರಿಂದ ಸಂಸ್ಥೆಗೆ ಇದೊಂದು ಅಭೂತಪೂರ್ವ ಸಾಧನೆ ಯಾಗಿದೆ. ಇದು ಭೂಕಂಪದ ಆರಂಭವನ್ನು ಪತ್ತೆ ಮಾಡುತ್ತದೆ ಮತ್ತು ಒಂದು ಪ್ರದೇಶದಲ್ಲಿ ಕಂಪನಗಳು ಸಂಭವಿಸುವ ಮುನ್ನ ಮುನ್ನೆಚ್ಚರಿಕೆ ನೀಡುತ್ತದೆ ಎಂದು ರೂರ್ಕಿಯ ಐಐಟಿ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಉತ್ತರಾಖಂಡದ ಗರ್ವಾಲ್ ಪ್ರದೇಶಕ್ಕಾಗಿ ಭೂ ವಿಜ್ಞಾನ ಸಚಿವಾಲಯವು ಆರಂಭದಲ್ಲಿ ಪ್ರಾಯೋಗಿಕ ಯೋಜನೆಯಾಗಿ ಆರಂಭಿಸಿತ್ತು.