Friday, 13th December 2024

ಉತ್ತರಪ್ರದೇಶ: ಎನ್‌ ಡಿಎಗೆ ತೀವ್ರ ಹಿನ್ನಡೆ

ವದೆಹಲಿ/ಲಕ್ನೋ: ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಉತ್ತರಪ್ರದೇಶ ಎಲ್ಲಾ ಪಕ್ಷಗಳಿಗೂ ನಿರ್ಣಾಯಕವಾಗಿದ್ದು, 80 ಲೋಕಸಭಾ ಕ್ಷೇತ್ರಗಳ ಪೈಕಿ ಇಂಡಿಯಾ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಎನ್‌ ಡಿಎ ತೀವ್ರ ಹಿನ್ನಡೆ ಅನುಭವಿಸಿರುವುದು ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ಉತ್ತರಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಅಂದಾಜು 70ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಹೊಂದಿತ್ತು. ಆದರೆ ಫಲಿತಾಂಶದಲ್ಲಿ ಬಿಜೆಪಿ ಭಾರೀ ಹಿನ್ನಡೆ ಅನುಭವಿಸಿದೆ.

ಉತ್ತರಪ್ರದೇಶದಲ್ಲಿ ಈ ಬಾರಿ ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ 62 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಕಾಂಗ್ರೆಸ್‌ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಭಾರತೀಯ ಜನತಾ ಪಕ್ಷ ಅಪ್ನಾ ದಳ, ಜಯಂತ್‌ ಚೌಧರಿ ನೇತೃತ್ವದ ಆರ್‌ ಎಲ್‌ ಡಿ ಮತ್ತು ಸುಹೇಲ್‌ ದೇವ್‌ ಭಾರತೀಯ ಸಮಾಜ್‌ ಪಾರ್ಟಿ ಮೈತ್ರಿಯೊಂದಿಗೆ ಸ್ಪರ್ಧಿಸಿತ್ತು.

ಉತ್ತರಪ್ರದೇಶದಲ್ಲಿ ಎನ್‌ ಡಿಎ 36 ಕ್ಷೇತ್ರಗಳಲ್ಲಿ ಹಾಗೂ ಇಂಡಿಯಾ ಮೈತ್ರಿಕೂಟ 45 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಯ್‌ ಬರೇಲಿಯಲ್ಲಿ ರಾಹುಲ್‌ ಗಾಂಧಿ ಮುನ್ನಡೆ ಸಾಧಿಸಿರುವುದಾಗಿ ವರದಿ ತಿಳಿಸಿದೆ.

ಉತ್ತರಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ ನ ಅಜಯ್‌ ರಾಯ್‌ ಹಿನ್ನಡೆ ಅನುಭವಿಸಿದ್ದು, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಮುನ್ನಡೆ ಸಾಧಿಸಿದ್ದಾರೆ.