ನವದೆಹಲಿ: ಹಿರಿಯ ನ್ಯಾಯಾಧೀಶರು ಮತ್ತು ಅವರ ಸಹೋದ್ಯೋಗಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಉತ್ತರ ಪ್ರದೇಶದ ಮಹಿಳಾ ನ್ಯಾಯಾಧೀಶೆಯೊಬ್ಬರು ತನಗೆ ದಯಾಮರಣ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಈ ವಿಷಯದ ಬಗ್ಗೆ ಅಲಹಾಬಾದ್ ಹೈಕೋರ್ಟ್ನಿಂದ ಸ್ಪಷ್ಟನೆ ಕೋರಿದ್ದಾರೆ.
ಅಲ್ಲದೇ ಪತ್ರವನ್ನೇ ಅರ್ಜಿಯನ್ನಾಗಿ ಪರಿಗಣಿಸಿರುವ ಚಂದ್ರಚೂಡ್, ಇವತ್ತೇ ಪ್ರಕರಣದ ವಿಚಾರಣೆ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.
“ದಯವಿಟ್ಟು ನನ್ನ ಜೀವನವನ್ನು ಗೌರವಯುತವಾಗಿ ಕೊನೆಗೊಳಿಸಲು ನನಗೆ ಅನುಮತಿ ನೀಡಿ. ನನ್ನ ಜೀವನ ಕೊನೆಯಾಗಲಿ” ಎಂದು ನ್ಯಾಯಾಧೀಶೆ ಪತ್ರದಲ್ಲಿ ಬರೆದಿದ್ದಾರೆ.
“ನಾನು ತಡೆಯಲು ಆಗದಷ್ಟು ನನಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ನನ್ನನ್ನು ಸಂಪೂರ್ಣ ಕಸದಂತೆ ನಡೆಸಿಕೊಳ್ಳಲಾಗಿದೆ. ನನ್ನ ಜೀವನ ಕ್ರಿಮಿಕೀಟದ ಜೀವನದಂತಾಗಿದೆ” ಎಂದು ಪತ್ರದಲ್ಲಿ ಹೇಳಿದ್ದಾರೆ.
ಚಂದ್ರಚೂಡ್ ಅವರ ಸೂಚನೆಯ ಮೇರೆಗೆ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿ ಅತುಲ್ ಎಂ ಕುರ್ಹೇಕರ್ ಅವರು ಅಲಹಾಬಾದ್ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ಗೆ ಪತ್ರ ಬರೆದು, ಮಹಿಳಾ ನ್ಯಾಯಾಧೀಶರ ದೂರಿನ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಕೋರಿದ್ದರು.
ಜುಲೈ 2023 ರಲ್ಲಿ ಹೈಕೋರ್ಟ್ನ ಆಂತರಿಕ ದೂರು ಸಮಿತಿಗೆ ದೂರು ನೀಡಿದ್ದಾಗಿ ಹಾಗೂ ತನ್ನ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ನ್ಯಾಯಾಧೀಶೆ ಹೇಳಿಕೊಂಡಿದ್ದಾರೆ. ಆದರೆ, ವಿಚಾರಣೆಯು ಸಂಪೂರ್ಣ ಮೋಸದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.