Wednesday, 6th November 2024

ಇನ್ನು ಶೃಂಗಾರ ಗೌರಿ, ಶಿವಲಿಂಗಕ್ಕೆ ಪ್ರತಿನಿತ್ಯ ಪೂಜೆ: ವಾರಣಾಸಿ ಕೋರ್ಟ್

ವಾರಾಣಸಿ: ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಇರುವ ಶೃಂಗಾರ ಗೌರಿ ಹಾಗೂ ಶಿವಲಿಂಗಕ್ಕೆ ಪೂಜೆ ಸಲ್ಲಿಸಿಲು ವಾರಣಾಸಿ ಕೋರ್ಟ್​ ಅನುಮತಿ ನೀಡಿದೆ.

ಶೃಂಗಾರ ಗೌರಿ ಹಾಗೂ ಶಿವಲಿಂಗಕ್ಕೆ ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೋರಿ ರಾಖಿ ಸಿಂಗ್ ಸೇರಿ ನಾಲ್ವರು ಮಹಿಳೆಯರು ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್​ ಪುರಸ್ಕರಿಸಿದೆ.

ಜ್ಞಾನವಾಪಿ ಮಸೀದಿಯಲ್ಲಿ ಉತ್ಖನನ ನಡೆಸಲು ಕೆಳ ಹಂತದ ನ್ಯಾಯಾಲಯ ಅನುಮತಿ ನೀಡಿತ್ತು. ಪರಿಶೀಲನೆ ವೇಳೆ ಮಸೀದಿಯ ಆವರಣದಲ್ಲಿದ್ದ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ ಹಾಗೂ ಮಂಗಳ ಗೌರಿಯ ದೇವಸ್ಥಾನ ಇದೆ ಎಂದು ಅಧಿಕಾರಿ ಗಳು ಕೋರ್ಟ್‍ಗೆ ವರದಿ ನೀಡಿದ್ದರು.

ವಾದ-ವಿವಾದ- ಪ್ರತಿವಾದಗಳ ನಡುವೆಯೇ ತಮಗೆ ಪೂಜೆಗೆ ಅವಕಾಶ ನೀಡುವಂತೆ ಕೋರಿ ಮಹಿಳೆಯರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಮೂರು ತಿಂಗಳಿಗೂ ಹೆಚ್ಚು ಕಾಲ ವಾದ-ಪ್ರತಿವಾದ ನಡೆದಿತ್ತು.

ತೀರ್ಪಿಗೂ ಮುನ್ನ ಕೋರ್ಟ್​ ಆವರಣದಲ್ಲಿ ಜಮಾಯಿಸಿದ್ದ ಹಿಂದೂ ಭಕ್ತರು ಪೂಜೆ ಸಲ್ಲಿಸಿದ ಘಟನೆ ಕೂಡ ನಡೆದಿದೆ. ಅರ್ಜಿದಾರ ಮಹಿಳೆಯರಿಗೆ ಶಾಲು ಹಾಕಿ ಸನ್ಮಾನ ಕೂಡ ಮಾಡಲಾಯಿತು.