Saturday, 23rd November 2024

Vastu Tips: ಮನೆಗೆ ಧನಾತ್ಮಕ ಶಕ್ತಿಯನ್ನು ಆಹ್ವಾನಿಸಲು ಉಯ್ಯಾಲೆ ಹೇಗಿರಬೇಕು?

Vastu Tips

ಮನೆಯ ಬಾಲ್ಕನಿಯ ಉಯ್ಯಾಲೆಯಲ್ಲಿ (Swing In Balcony) ಕುಳಿತು ಒಂದು ಕಪ್ ಕಾಫಿ ಹೀರುತ್ತಾ, ಪೇಪರ್ ಓದುವ ಖುಷಿ ಬಲ್ಲವನೇ ಬಲ್ಲ. ಉಯ್ಯಾಲೆಯೊಂದಿಗೆ ನಮ್ಮ ನಂಟು ಬಾಲ್ಯದಿಂದಲೂ ಬಂದಿರುತ್ತದೆ. ಹೀಗಾಗಿ ಎಲ್ಲರಿಗೂ ಉಯ್ಯಾಲೆಯ (Vastu for swing) ಮೇಲೆ ಒಂದು ರೀತಿಯ ಪ್ರೀತಿ ಇದ್ದೇ ಇದೆ. ಬಾಲ್ಕನಿಯಲ್ಲಿ ಇಡುವ ಉಯ್ಯಾಲೆಯನ್ನು ವಾಸ್ತು ಪ್ರಕಾರವಾಗಿ (Vastu Tips) ಇರಿಸಿದರೆ ಮನೆಯಲ್ಲಿ ಧನಾತ್ಮಕತೆಯನ್ನು ವೃದ್ಧಿಸಿಕೊಳ್ಳಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ.

ಮನೆಯಲ್ಲಿ ಇರಿಸಲಾಗಿರುವ ಪ್ರತಿಯೊಂದು ವಸ್ತು ಕೂಡ ಅಲ್ಲಿ ವಾಸಿಸುವವರ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಇಡುವ ಎಲ್ಲಾ ವಸ್ತುಗಳು ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ ಇರಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ.

ವಾಸ್ತು ಶಾಸ್ತ್ರದಲ್ಲಿ, ದಿಕ್ಕು, ಸ್ಥಳ, ಬಣ್ಣ ಮತ್ತು ಆಕಾರದಂತಹ ಅನೇಕ ವಿಷಯಗಳ ಮಹತ್ವವನ್ನು ಹೇಳಲಾಗಿದೆ. ಅದನ್ನು ಅನುಸರಿಸಿದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ವೃದ್ಧಿಸಿಕೊಳ್ಳಬಹುದು. ಇದರಲ್ಲಿ ಮನೆಯಲ್ಲಿಡುವ ಉಯ್ಯಾಲೆಯೂ ಸೇರಿದೆ. ಮನೆಯ ಬಾಲ್ಕನಿಯಲ್ಲಿ ಇಡುವ ಉಯ್ಯಾಲೆ ಹೇಗಿರಬೇಕು, ಯಾವ ದಿಕ್ಕಿನಲ್ಲಿರಬೇಕು ಎನ್ನುವುದಕ್ಕೆ ವಾಸ್ತು ಶಾಸ್ತ್ರದಲ್ಲಿ ಏನಿದೆ ನೋಡೋಣ..

Vastu Tips

ಸರಿಯಾದ ದಿಕ್ಕು

ವಾಸ್ತು ಪ್ರಕಾರ ಮನೆಯ ಬಾಲ್ಕನಿಯಲ್ಲಿ ಉಯ್ಯಾಲೆಯನ್ನು ಇಡಲು ಸರಿಯಾದ ದಿಕ್ಕು ಪಶ್ಚಿಮವಾಗಿದೆ. ವಾಯುವ್ಯ ದಿಕ್ಕಿನಲ್ಲೂ ಇರಿಸಬಹುದು. ಆದರೆ ಉಯ್ಯಾಲೆಯಲ್ಲಿ ಕುಳಿತಾಗ ಅದು ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ತೂಗಬೇಕು. ಉತ್ತರ ಅಥವಾ ದಕ್ಷಿಣ ದಿಕ್ಕಿಗೆ ತೂಗಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಕೆಂಪು ಬಣ್ಣ ಬೇಡ

ಉಯ್ಯಾಲೆಯ ಬಣ್ಣಗಳ ಬಗ್ಗೆಯೂ ಗಮನವಿರಲಿ. ಗಾಢ ಬಣ್ಣ ಅದರಲ್ಲೂ ಕೆಂಪು ಬಣ್ಣವಿರುವ ಉಯ್ಯಾಲೆಯನ್ನು ಆಯ್ಕೆ ಮಾಡದಿರುವುದು ಸೂಕ್ತ. ವಾಸ್ತು ಪ್ರಕಾರ ಚಲಿಸುವ ವಸ್ತು ಯಾವುದೇ ಆಗಿರಲಿ ಅದಕ್ಕೆ ಕೆಂಪು ಬಣ್ಣವನ್ನು ಬಳಸಬಾರದು. ಯಾಕೆಂದರೆ ಅದು ನಕಾರಾತ್ಮಕತೆಗೆ ಕಾರಣವಾಗಬಹುದು. ಕೆನೆ ಅಥವಾ ಕಂದು ಬಣ್ಣದ ಉಯ್ಯಾಲೆ ಉತ್ತಮ. ಉಯ್ಯಾಲೆಯನ್ನು ಕಬ್ಬಿಣದಿಂದ ಮಾಡಲ್ಪಟ್ಟಿದ್ದರೆ ಅದಕ್ಕೆ ಕಪ್ಪು ಬಣ್ಣದ ಕೋಟ್ ಮಾಡಬಹುದು.

ಶಬ್ದ ಮಾಡದೇ ಇರಲಿ

ವಾಸ್ತು ಶಾಸ್ತ್ರದ ಪ್ರಕಾರ ಬಾಲ್ಕನಿಯಲ್ಲಿ ಸದ್ದು ಮಾಡುವ ಉಯ್ಯಾಲೆಯನ್ನು ಇರಿಸಬಾರದು. ಯಾಕೆಂದರೆ ಅದು ಮಂಗಳಕರವಲ್ಲ. ಒಂದು ವೇಳೆ ಅದು ಶಬ್ದ ಮಾಡುತ್ತಿದ್ದರೆ ಅದರ ಮೇಲೆ ಎಣ್ಣೆ ಹಾಕಿ ಸರಿ ಪಡಿಸಿ. ಇಲ್ಲವಾದರೆ ಉಯ್ಯಾಲೆಯನ್ನು ಬದಲಾಯಿಸಿ.

Vastu Tips

ಮರದ ಉಯ್ಯಾಲೆ ಒಳ್ಳೆಯದು

ಕಬ್ಬಿಣ, ಪ್ಲಾಸ್ಟಿಕ್ ಉಯ್ಯಾಲೆಗಳು ಕಡಿಮೆ ಬೆಲೆಗೆ ಲಭ್ಯವಿದ್ದರೂ ಮನೆಗೆ ಮರದ ಉಯ್ಯಾಲೆ ಉತ್ತಮ ಎನ್ನುತ್ತದೆ ವಾಸ್ತು ಶಾಸ್ತ್ರ. ಮನೆಯಲ್ಲಿ ಮರದ ಉಯ್ಯಾಲೆಯನ್ನು ಇಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ, ಮನೆಯವರ ಮಧ್ಯೆ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Vastu Tips: ಕೆಟ್ಟ ದೃಷ್ಟಿ ದೂರವಿಡಲು ವಿಂಡ್ ಚೈಮ್ ಎಲ್ಲಿಡಬೇಕು?

ಅರ್ಧವೃತ್ತಾಕಾರದ ಉಯ್ಯಾಲೆ ಸೂಕ್ತ

ಬಾಲ್ಕನಿಯಲ್ಲಿ ಅರ್ಧವೃತ್ತಾಕಾರದ ಆಕೃತಿಯ ಉಯ್ಯಾಲೆ ಇಡುವುದು ಒಳ್ಳೆಯದು. ಇದರಿಂದ ಬಾಲ್ಕನಿಯ ಸೌಂದರ್ಯ ಹೆಚ್ಚುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮರದಿಂದ ಮಾಡಿದ ಸುತ್ತಿನ ಅಥವಾ ಅರ್ಧವೃತ್ತಾಕಾರದ ಉಯ್ಯಾಲೆಯು ಧನಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ.