Wednesday, 11th December 2024

ಉರಗ ರಕ್ಷಕ ವಾವಾ ಸುರೇಶ್ ಚೇತರಿಕೆ, ಆಸ್ಪತ್ರೆಯಿಂದ ಬಿಡುಗಡೆ

ಕೊಟ್ಟಾಯಂ: ಕೊಟ್ಟಾಯಂ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉರಗ ರಕ್ಷಕ ವಾವಾ ಸುರೇಶ್ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜನವರಿ 21 ರಂದು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಭಾರಿ ಗಾತ್ರದ ನಾಗರಹಾವು ಹಿಡಿದು ಚೀಲದಲ್ಲಿರಿಸಲು ಪ್ರಯತ್ನಿಸಿದಾಗ ಆಕಸ್ಮಿಕವಾಗಿ ಹಾವು ವಾವಾ ಸುರೇಶ್ ಅವರ ಕಾಲಿಗೆ ಕಚ್ಚಿತ್ತು. ಕೂಡಲೇ ಹಾವನ್ನು ನೆಲಕ್ಕೆ ಚೆಲ್ಲಿದ ಅವರು ಅಲ್ಲಿಂದ ದೂರ ಸರಿದಿದ್ದರು. ಬಳಿಕ ಪ್ರಜ್ಞಾಹೀನರಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಸುರೇಶ್ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಉಸಿರಾಡಲು ವೆಂಟಿಲೇಟರ್ ಬೆಂಬಲ ನೀಡಲಾಗಿತ್ತು. ಅವರಿಗೆ ವೈದ್ಯರು 65 ಬಾಟಲ್ ವಿಷ ಪ್ರತಿರೋಧಕ ನೀಡಿದ್ದಾರೆ.

ಸತತ ನಿಗಾ ವಹಿಸುವಿಕೆ, ನಿರಂತರ ಚಿಕಿತ್ಸೆ ಬಳಿಕ ವಾವಾ ಸುರೇಶ್ ಚೇತರಿಸಿಕೊಂಡಿದ್ದಾರೆ. ಆ ಬಳಿಕ ಅಗತ್ಯ ಮಾರ್ಗದರ್ಶನದೊಂದಿಗೆ ಅವರನ್ನು ವೈದ್ಯರು ಮನೆಗೆ ಕಳುಹಿಸಿದ್ದಾರೆ.

ವಾವಾ ಸುರೇಶ್ ತಮ್ಮ ಬಾಲ್ಯದಿಂದಲೂ ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸುವುದರಲ್ಲಿ ಪರಿಣಿತರು. ಇದುವರೆಗೂ 30 ಸಾವಿರಕ್ಕೂ ಹೆಚ್ಚು ಹಾವು ಗಳನ್ನು ಹಿಡಿದಿದ್ದಾರೆ. ಕೇರಳದ ಪಶ್ಚಿಮ ಘಟ್ಟಗಳ ಪ್ರದೇಶಗಳ ಜನವಸತಿ ಪ್ರದೇಶಗಳಲ್ಲಿ ಕಾಳಿಂಗ ಸರ್ಪಗಳು ಕಾಣಿಸಿಕೊಂಡರೆ ಅಲ್ಲಿಯವರು ಅರಣ್ಯ, ಪೊಲೀಸ್ ಸಿಬ್ಬಂದಿ ಮತ್ತು ವಾವಾ ಸುರೇಶ್ ಅವರಿಗೆ ಕರೆ ಮಾಡುತ್ತಾರೆ.