ಮುಂಬೈ: ಭಾರತ ತಂಡದ ಮಾಜಿ ಎಡಗೈ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ(Vinod Kambli) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಚಿನ್ ತೆಂಡೂಲ್ಕರ್(Sachin Tendulkar) ಜೊತೆಗೆ ಕಾಂಬ್ಳಿ ಕಾಣಿಸಿಕೊಂಡ ವಿಡಿಯೊವೊಂದು ಸಾಕಷ್ಟು ವೈರಲ್ ಆಗಿತ್ತು. ಅದರಿಂದೀಚೆಗೆ ವಿನೋದ್ ಕಾಂಬ್ಳಿಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕಾಂಬ್ಳಿ ಆರೋಗ್ಯ ಸ್ಥಿತಿ ನೋಡಿ ಅವರ ಅಭಿಮಾನಿಗಳು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಚಿಕಿತ್ಸೆ ವೆಚ್ಚವನ್ನು ಭರಿಸಲು ಮಾಜಿ ಕ್ರಿಕೆಟಿಗರು ಮುಂದೆ ಬಂದಿದ್ದಾರೆ. ಇದೆಲ್ಲದರ ನಡುವೆ ಸ್ವತಃ ವಿನೋದ್ ಕಾಂಬ್ಳಿ ತಮ್ಮ ಅನಾರೋಗ್ಯ ಸಮಸ್ಯೆಗಳನ್ನು(Health Issues) ಹೇಳಿಕೊಂಡಿದ್ದಾರೆ.
I saw his several vids fighting with neighbours, security guard over parking etc…. #perhaps #karmahttps://t.co/5o4tqo9upV
— SanjeevKumar (@SanjeevKumarNM) December 13, 2024
ಕಳೆದ ಕೆಲವು ದಿನಗಳಿಂದ, ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ .ಇತ್ತೀಚೆಗೆ ಮುಂಬೈಯ( Mumbai) ಶಿವಾಜಿ ಪಾರ್ಕ್‌ನಲ್ಲಿ ತಮಗೆ ತರಬೇತಿ ನೀಡಿದ ದಿವಂಗತ ರಮಾಕಾಂತ್ ಅಚ್ರೇಕರ್ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಕಾಂಬ್ಳಿ ಭಾಗವಹಿಸಿದ್ದರು .ಕಾರ್ಯಕ್ರಮದ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ವಿಡಿಯೊದಲ್ಲಿ ನೋಡುವಂತೆ ಕಾಂಬ್ಳಿ ನಡೆದಾಡಲೂ ಕಷ್ಟಪಡುತ್ತಿದ್ದರು. ಈಗ ಸ್ವತಃ ಕಾಂಬ್ಳಿ ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. 52 ವರ್ಷದ ಕಾಂಬ್ಳಿ ಅವರ ಆರೋಗ್ಯ ಈಗ ಸ್ವಲ್ಪಮಟ್ಟಿಗೆ ಸುಧಾರಿಸಿದ್ದು, ಸುಮಾರು ಒಂದು ತಿಂಗಳ ಹಿಂದೆ ಆರೋಗ್ಯದ ಸಮಸ್ಯೆಗಳನ್ನು ಎದುರಿಸಿದ್ದಾರೆ.
ತಾವು ಮೂತ್ರದ ಸೋಂಕಿನಿಂದ ಬಳಲುತ್ತಿದ್ದೇನೆ ಎಂದು ಕಾಂಬ್ಳಿ ಹೇಳಿಕೊಂಡಿದ್ದಾರೆ. ಅವರ ಪತ್ನಿ ಮತ್ತು ಮಕ್ಕಳು ಅವರೊಂದಿಗೆ ಒತ್ತಾಸೆಯಾಗಿ ನಿಂತು ಆರೋಗ್ಯವನ್ನು ಸುಧಾರಿಸಲು ನೆರವಾಗಿದ್ದಾರೆ.
“ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ನನ್ನ ಹೆಂಡತಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಅವಳು ನನ್ನನ್ನು ಸಾಕಷ್ಟು ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾಳೆ. ‘ನೀನು ಫಿಟ್ ಆಗಬೇಕು’ ಎಂದು ಹೇಳುತ್ತಿರುತ್ತಾಳೆ. ಅಜಯ್ ಜಡೇಜಾ ನನ್ನನ್ನು ಭೇಟಿ ಮಾಡಲು ಬಂದಿದ್ದರು. ತುಂಬಾ ಸಂತೋಷವಾಯಿತು. ಕಳೆದ ತಿಂಗಳು ನಾನು ಒಂದು ಕಾಯಿಲೆಯಿಂದ ಬಳಲುತ್ತಿದ್ದೆ. ಅದರಿಂದ ಕುಸಿದು ಬಿದ್ದೆ, ಅಡ್ಮಿಟ್ ಆಗಲು ನನಗೆ ವೈದ್ಯರು ಹೇಳಿದರು” ಎಂದು ಕಾಂಬ್ಲಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
ವಿಡಿಯೊದಲ್ಲಿ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ 224 ರನ್ ಗಳಿಸಿದ್ದನ್ನು ಕಾಂಬ್ಳಿ ನೆನಪಿಸಿಕೊಂಡಿದ್ದಾರೆ. “ವಾಂಖೆಡೆಯಲ್ಲಿ ನಾನು ಡಬಲ್ ಸೆಂಚುರಿ ಹೊಡೆದಿದ್ದೆ. ಅದನ್ನು ಆಗಾಗ್ಗೆ ನೆನಪು ಮಾಡಿಕೊಳ್ಳುತ್ತೇನೆ. ನನ್ನೊಂದಿಗೆ ಅಚ್ರೇಕರ್ ಸರ್ ಮತ್ತು ನಮ್ಮ ತಂಡದ ಸಹ ಆಟಗಾರರು ಇದ್ದರು. ಅದು ಅದ್ಭುತ ತಂಡವಾಗಿತ್ತು. ನಮ್ಮಲ್ಲಿ ಅನಿಲ್ ಕುಂಬ್ಳೆ , ರಾಜೇಶ್ ಚೌಹಾಣ್, ವೆಂಕಟೇಶ್ ಪ್ರಸಾದ್ ಇದ್ದರು . ನಾವು ಶ್ರೀಲಂಕಾ ವಿರುದ್ಧ ಆಟವಾಡಿದ್ದೆವು” ಎಂದು ತಮ್ಮ ಹಳೆಯ ದಿನಗಳನ್ನು ನೆನೆದು ಕಾಂಬ್ಳಿ ಭಾವುಕರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ:Vinod Kambli ನನ್ನ ಮಗನಿದ್ದಂತೆ, ಅವರನ್ನು ನೋಡಿಕೊಳ್ಳುತ್ತೇವೆ: ಸುನೀಲ್ ಗವಾಸ್ಕರ್!