Friday, 20th December 2024

Viral News: ನಿಂತಿದ್ದ ರೈಲಿನ ಮೇಲೇರಿ ಹೈವೋಲ್ಟೇಜ್‌ ಲೈನ್‌ ಸ್ಪರ್ಶಿಸಿ ಯುವಕನ ಹುಚ್ಚಾಟ; ಭೀಕರ ಸ್ಫೋಟದ ವಿಡಿಯೊ ವೈರಲ್‌

ಭೋಪಾಲ್‌: ಮಧ್ಯ ಪ್ರದೇಶ (Madhya Pradesh)ದ ಬುರ್ಹಾನ್ಪುರ (Burhanpur)ದಲ್ಲಿ ವ್ಯಕ್ತಿಯೊಬ್ಬ ನಿಂತಿದ್ದ ರೈಲಿನ ಮೇಲೇರಿ ಹೈವೂಲ್ಟೇಜ್‌ ಲೈನ್‌ ಮುಟ್ಟಿದ ಪರಿಣಾಮ ಸ್ಫೋಟ ಸಂಭವಿಸಿ ಗಂಭೀರ ಗಾಯಗೊಂಡಿದ್ದಾನೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral News)

ಬುರ್ಹಾನ್ಪುರದ ಲಾಲ್‌ಬಾಗ್‌ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈತ ಗುರುವಾರ (ಡಿ. 19) ರಾತ್ರಿ ಇದ್ದಕ್ಕಿದ್ದಂತೆ ರೈಲಿನ ಛಾವಣಿಯ ಮೇಲೆ ಹತ್ತಿ ಹೈವೂಲ್ಟೇಜ್‌ ಲೈನ್‌ ಅನ್ನು ಹಿಡಿದಿದ್ದ. ಇದರಿಂದ ರೈಲು ನಿಲ್ದಾಣದಲ್ಲಿ ಬಹುದೊಡ್ಡ ಸ್ಫೋಟ ಸಂಭವಿಸಿತು. ಪರಿಣಾಮ ಆ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ. ಸ್ಫೋಟದೊಂದಿಗೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಆತನ ದೇಹ ಸುಟ್ಟು ಹೋಗಿದೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಿತಿ ಗಂಭೀರ

ʼʼಗುರುವಾರ ಸಂಜೆ ಪವನ್ ಎಕ್ಸ್‌ಪ್ರೆಸ್‌ ಲಾಲ್‌ಬಾಗ್‌ ನಿಲ್ದಾಣದಲ್ಲಿ ನಿಂತಿತ್ತು. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಆ ವ್ಯಕ್ತಿ ರೈಲು ಬೋಗಿಯ ಮೇಲೆ ಹತ್ತಿದನು. ಅವನು ವಿದ್ಯುತ್‌ ಲೈನ್‌ ಅನ್ನು ಸ್ಪರ್ಶಿಸದಂತೆ ನೆರೆದಿದ್ದ ಜನರು, ಪೊಲೀಸರು ಕೂಗಿದರೂ ಅವನು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಹೈವೋಲ್ಟೇಜ್‌ ತಂತಿಯನ್ನು ಆತ ಹಿಡಿಯುತ್ತಿದ್ದಂತೆ ಬಲವಾದ ಸ್ಫೋಟ ಸಂಭವಿಸಿತು ಮತ್ತು ಬಳಿಕ ಆತ ರೈಲಿನ ಮೇಲಿನಿಂದ ಕೆಳಗ್ಗೆ ಬಿದ್ದ. ಕೂಡಲೇ ಆತನನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಆತನ ಸ್ಥಿತಿ ಗಂಭೀರವಾಗಿದೆʼʼ ಎಂದು ಮೂಲಗಳು ತಿಳಿಸಿವೆ.

ಗುರುತು ಪತ್ತೆಯಾಗಿಲ್ಲ

ಜಿಆರ್‌ಪಿ ಎಎಸ್ಐ ಅಬ್ದುಲ್ ಶರೀಫ್ ಈ ಬಗ್ಗೆ ಮಾತನಾಡಿ, “ಗಾಯಗೊಂಡ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ರೈಲು ನಿಂತ ಕೂಡಲೇ ಇದ್ದಕ್ಕಿದ್ದಂತೆ ಅವಘಡ ಸಂಭವಿಸಿದೆ. ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಜಿಆರ್‌ಪಿ ಮತ್ತು ಆರ್‌ಪಿಎಫ್‌ ಪೊಲೀಸರು ವ್ಯಕ್ತಿಯನ್ನು ಗುರುತು ಪತ್ತೆ ಹಚ್ಚಲು ಕಾರ್ಯ ನಿರತರಾಗಿದ್ದಾರೆʼʼ ಎಂದು ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ತನಗೆ ಬೇಕಾದುದನ್ನು ಧರಿಸುವುದು ಮಹಿಳೆಯ ಹಕ್ಕು: ಪ್ರಿಯಾಂಕಾ ಗಾಂಧಿ