Friday, 13th December 2024

Viral News: ಎಡಗಣ್ಣಿನ ಬದಲು ಬಲಗಣ್ಣಿಗೆ ಸರ್ಜರಿ; ವೈದ್ಯರ ಎಡವಟ್ಟಿಗೆ 7 ವರ್ಷದ ಬಾಲಕನ ಸ್ಥಿತಿ ಏನಾಗಿದೆ ಗೊತ್ತಾ?

Surgery Tragedy

ಗ್ರೇಟರ್ ನೋಯ್ಡಾ: “ವೈದ್ಯೋ ನಾರಾಯಣೋ ಹರಿ” ಎಂಬ ಮಾತಿದೆ. ಆದರೆ ಈಗ ವೈದ್ಯರೆಂದರೆ ಭಯಪಡುವ ಕಾಲ ಎದುರಾಗಿದೆ. ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ವೈದ್ಯರು ಮಾಡಿದ ಎಡವಟ್ಟಿನ ಕೆಲಸವೊಂದು ಭಾರೀ ಸುದ್ದಿಯಾಗಿದೆ.  ಇಲ್ಲಿ ಎಡಗಣ್ಣಿನ ಶಸ್ತ್ರಚಿಕಿತ್ಸೆಗೆ(Surgery Tragedy) ಹೋದ ಏಳು ವರ್ಷದ ಬಾಲಕನಿಗೆ ವೈದ್ಯರು  ಬಲಗಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸೆಕ್ಟರ್ ಗಾಮಾ 1 ರ ಆನಂದ್ ಸ್ಪೆಕ್ಟ್ರಮ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ ಎಂಬುದಾಗಿ ತಿಳಿದುಬಂದಿದೆ(Viral News).

ಬಾಲಕನ ತಂದೆ ನಿತಿನ್ ಭಾಟಿ ಅವರ ಪ್ರಕಾರ, ಬಾಲಕನ ಎಡಗಣ್ಣಿನಲ್ಲಿ ಆಗಾಗ್ಗೆ ನೀರು ಬರುತ್ತಿದ್ದರಿಂದ ಅವರು ಅವನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರಂತೆ. ಪರೀಕ್ಷೆಯ ನಂತರ, ವೈದ್ಯ ಆನಂದ್ ವರ್ಮಾ ಬಾಲಕನ ಕಣ್ಣಿನಲ್ಲಿ ಪ್ಲಾಸ್ಟಿಕ್ ತರಹದ ವಸ್ತುವಿದೆ. ಅದನ್ನು ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಬಹುದು ಎಂದು ಹೇಳಿದರು. ಮತ್ತು ಈ ಶಸ್ತ್ರಚಿಕಿತ್ಸೆಗೆ ರೂ. 45,000 ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.

ಅದರಂತೆ ವೈದ್ಯರು ಇತ್ತೀಚೆಗೆ  ಬಾಲಕ ಯುಧಿಷ್ಠಿರನಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಮನೆಗೆ ಬಂದಾಗ, ಹುಡುಗನ ತಾಯಿ ಆತನಿಗೆ ಇನ್ನೊಂದು ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿರುವುದನ್ನು ಗಮನಿಸಿದ್ದಾರೆ. ಇದರ ನಂತರ, ಅವನ ಪೋಷಕರು ವೈದ್ಯರನ್ನು ಪ್ರಶ್ನಿಸಿದ್ದಾರೆ.  ಆದರೆ ವೈದ್ಯರು ಮತ್ತು ಅವರ ಸಿಬ್ಬಂದಿ ಬಾಲಕನ ಪೋಷಕರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ. ನಂತರ ಕುಟುಂಬದವರು ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿಗೆ (ಸಿಎಂಒ) ದೂರು ನೀಡಿ, ವೈದ್ಯರ ಲೈಸೆನ್ಸ್‌ ಅನ್ನು ರದ್ದುಗೊಳಿಸುವಂತೆ ಮತ್ತು ಆಸ್ಪತ್ರೆಯನ್ನು ಸೀಲ್ ಮಾಡುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಶುರುಮಾಡಿ  ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಪಾಕಿಸ್ತಾನದ ಮತ್ತೊಬ್ಬ ಟಿಕ್ ಟಾಕ್ ಸ್ಟಾರ್ ಖಾಸಗಿ ವಿಡಿಯೊ‌ ಲೀಕ್; ಇದು ಪ್ರಚಾರದ ಗಿಮಿಕಾ…ಎಂದ ನೆಟ್ಟಿಗರು!

ವೈದ್ಯರು ಈ ರೀತಿ ಎಡವಟ್ಟು ಮಾಡಿದ ಘಟನೆ ಇದೇ ಮೊದಲಲ್ಲ. ಈ ಹಿಂದೆ ಥಾಣೆಯ ಸ್ಥಳೀಯ ಉಪ ಜಿಲ್ಲಾ ಆಸ್ಪತ್ರೆಯ ವೈದ್ಯರು 9 ವರ್ಷದ ಬಾಲಕನೊಬ್ಬನಿಗೆ  ಕಾಲಿನ ಶಸ್ತ್ರಚಿಕಿತ್ಸೆಯ ಬದಲು ಸುನ್ನತಿ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಾಲಕನ ಪೋಷಕರು ಆಸ್ಪತ್ರೆಯ ವೈದ್ಯರ ವಿರುದ್ಧ  ಶಹಾಪುರ ಪೊಲೀಸರಿಗೆ ದೂರು ನೀಡಿದ್ದು,  ಅದೇ ದಿನದಂದು ಒಂದೇ ವಯಸ್ಸಿನ ಮೂವರು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ವೈದ್ಯರು ಗೊಂದಲಕ್ಕೊಳಗಾಗಿ ಹೀಗೆ ಮಾಡಿದ್ದಾರೆ ಎಂದು ಹೇಳಲಾಗಿತ್ತು.