Saturday, 12th October 2024

Viral Video: ನಿವೃತ್ತ ಪೊಲೀಸ್ ಅಧಿಕಾರಿ ಮನೆ ಮೇಲೆ ದುಷ್ಕರ್ಮಿಗಳಿಂದ ಗ್ರೆನೇಡ್ ದಾಳಿ

Viral Video

ಚಂಡೀಗಢ: ಆಟೋ ರಿಕ್ಷಾದಲ್ಲಿ (auto rickshaw) ಬಂದ ದುಷ್ಕರ್ಮಿಗಳು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮನೆ (Ex-Cop’s House) ಮೇಲೆ ಗ್ರೆನೇಡ್ ದಾಳಿ (grenade attack) ನಡೆಸಿ ಆತಂಕ ಉಂಟು ಮಾಡಿರುವ ಘಟನೆ ಚಂಡೀಗಢದಲ್ಲಿ (Chandigarh) ನಡೆದಿದೆ. ಇದರ ದೃಶ್ಯಗಳು ಸಿಸಿಟಿವಿ ಕೆಮರಾವೊಂದರಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣ (social media) ಎಕ್ಸ್ ನಲ್ಲಿ ವೈರಲ್ (Viral Video) ಆಗಿದೆ.

ಬುಧವಾರ ಸಂಜೆ ಆರು ಗಂಟೆ ಸುಮಾರಿಗೆ ಆಟೋ ರಿಕ್ಷಾದಲ್ಲಿ ಬಂದ ದುಷ್ಕರ್ಮಿಗಳು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮನೆ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಎಫ್‌ಎಸ್‌ಎಲ್ ತಂಡವು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ ಎಂದು ಚಂಡೀಗಢ ಪೊಲೀಸ್‌ನ ಪಿಆರ್‌ಒ ದಲ್ಬೀರ್ ಸಿಂಗ್ ತಿಳಿಸಿದ್ದಾರೆ.

ನಗರದ ಸೆಕ್ಟರ್ 10 ರಲ್ಲಿ ಸಂಭವಿಸಿದ ಈ ಸ್ಫೋಟದಿಂದ ನಿವೃತ್ತ ಪೊಲೀಸ್ ಅಧಿಕಾರಿ ಮನೆಯ ಕಿಟಕಿಗಳನ್ನು ಒಡೆದಿದೆ. ಆದರೆ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಮನೆ ಸಮೀಪ ರಿಕ್ಷಾದಲ್ಲಿ ಬಂದಿರುವ ಮೂವರು ಸ್ಪೋಟಕವನ್ನು ಎಸೆದಿದ್ದಾರೆ. ಒಬ್ಬರು ಸ್ಫೋಟಕವನ್ನು ಎಸೆದಿದ್ದು, ಇನ್ನಿಬ್ಬರು ಆಟೋರಿಕ್ಷಾದಲ್ಲಿ ಕಾಯುತ್ತಿದ್ದರು. ಸ್ಪೋಟಕವನ್ನು ಎಸೆದ ಬಳಿಕ ತಪ್ಪಿಸಿಕೊಳ್ಳಲು ವೇಗವಾಗಿ ಆಟೋದಲ್ಲಿ ತೆರಳಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ.

ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ವೈರಲ್ ಆಗಿದೆ. ಸ್ಫೋಟದ ಸದ್ದು ಕೂಡ ದೃಶ್ಯಾವಳಿಗಳಲ್ಲಿ ಕೇಳಿಬಂದಿದೆ.

ಶಬ್ದ ದೊಡ್ಡದಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಕಡಿಮೆ ತೀವ್ರತೆಯ ಸ್ಪೋಟಕವನ್ನು ಎಸೆಯಲಾಗಿದೆ. ಮನೆಯ ಕೆಲವು ಕಿಟಕಿಗಳಿಗೆ ಹಾನಿಯಾಗಿವೆ. ಮನೆ ಮಂದಿ ಮನೆಯ ವರಾಂಡಾದಲ್ಲಿ ಕುಳಿತಿದ್ದರು. ಅವರು ಶಂಕಿತರನ್ನು ನೋಡಿದ್ದಾರೆ. ಆಟೋ ರಿಕ್ಷಾವನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕನ್ವರ್‌ದೀಪ್ ಕೌರ್ ತಿಳಿಸಿದ್ದಾರೆ.

Mandya Violence: ಮಂಡ್ಯ ಗಲಭೆ ಖಂಡಿಸಿ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ

ಸ್ಫೋಟವು ಸುಮಾರು 5- 8 ಇಂಚು ಆಳದ ರಂಧ್ರವನ್ನು ಮಾಡಿದೆ. ಬಾಂಬ್ ಪತ್ತೆ ದಳ ಮತ್ತು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ (ಸಿಐಎಸ್ಎಫ್) ತಂಡಗಳು ಅಪರಾಧ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸುತ್ತಿವೆ ಎಂದು ಅವರು ಹೇಳಿದ್ದಾರೆ.