Thursday, 12th December 2024

Viral Video: ಬಟ್ಟೆಯಂಗಡಿಯಲ್ಲಿ ಮಾಡೆಲ್‌ಗಳೇ ಗೊಂಬೆಗಳು! ಭಾರೀ ವೈರಲಾಗ್ತಿದೆ ಈ ವಿಡಿಯೊ

Viral Video

ಚೀನಾ : ಸಾಮಾನ್ಯವಾಗಿ ಬಟ್ಟೆ ಮಳಿಗೆಗಳಲ್ಲಿ ನಾನಾ ವಿನ್ಯಾಸದ ಬಟ್ಟೆಗಳನ್ನು ಪ್ರದರ್ಶಿಸಲು ಗೊಂಬೆಗಳನ್ನು ಬಳಸುತ್ತಾರೆ. ಗೊಂಬೆಗಳಿಗೆ ಬಟ್ಟೆಗಳನ್ನು ಉಡಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಾರೆ. ಇದನ್ನು ನಾವು ಎಲ್ಲಾ ಬಟ್ಟೆ ಮಳಿಗೆಗಳಲ್ಲಿ ಕಾಣುತ್ತೇವೆ. ಆದರೆ  ಚೀನಾದ ಒಂದು ಮಾಲ್‍ನಲ್ಲಿ ಬಟ್ಟೆಗಳ ಪ್ರದರ್ಶನಕ್ಕಾಗಿ ಗೊಂಬೆಗಳ ಬದಲು ಮಾಡೆಲ್‍ಗಳನ್ನು ಬಳಸಿಕೊಂಡಿದ್ದಾರಂತೆ. ಇಲ್ಲಿ ಮಾಡೆಲ್‍ಗಳು ಹೊಸ ವಿನ್ಯಾಸದ ಬಟ್ಟೆಗಳನ್ನು ಧರಿಸಿಕೊಂಡು ಬಟ್ಟೆ ಅಂಗಡಿಯ ಪ್ರದರ್ಶನ ಪ್ರದೇಶದಲ್ಲಿ ಇರಿಸಲಾದ ಟ್ರೆಡ್‍ಮಿಲ್‍ನಲ್ಲಿ ನಡೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಈ  ವೈರಲ್ ವಿಡಿಯೊದಲ್ಲಿ, ಮಾಡೆಲ್‍ಗಳು ಗೊಂಬೆಗಳಂತೆ ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ತೊಟ್ಟು  ಟ್ರೆಡ್‍ಮಿಲ್‍ನಲ್ಲಿ ಬೆಕ್ಕಿನ ನಡಿಗೆ ನಡೆದಿದ್ದಾರೆ. ಗ್ರಾಹಕರು ಅವರನ್ನು ನೋಡಿ ತಮಗಿಷ್ಟವಾದ ಬಟ್ಟೆಗಳನ್ನು ಆರಿಸಿದ್ದಾರೆ. ಮಾಡೆಲ್‍ಗಳು ಈ ರೀತಿ ಮಾಲ್‍ಗಳಲ್ಲಿ ಕೆಲಸ ಮಾಡುವುದನ್ನು ನೋಡಿ ಕೆಲವರು “ವಾವ್” ಎಂದು ಹೇಳಿದರೆ, ಇತರರಿಗೆ ಇದು “ವಿಲಕ್ಷಣ”ವಾಗಿ ಕಂಡಿದೆ. ಚೀನಿ ಮಾಲ್‍ಗಳಲ್ಲಿ ಗೊಂಬೆಗಳ ಬದಲು ಮಾಡೆಲ್‍ಗಳನ್ನು ಬಟ್ಟೆ ಪ್ರದರ್ಶನಕ್ಕಾಗಿ ಬಳಸಿಕೊಂಡಿರುವುದರ ಬಗ್ಗೆ ನೆಟ್ಟಿಗರು ಸೋಶಿಯಲ್ ಮೀಡಿಯಾಗಳಲ್ಲಿ  ಚರ್ಚೆಯನ್ನು ನಡೆಸಿದ್ದಾರೆ.

ಚೀನಾದ ಮಾಲ್‍ಗಳಲ್ಲಿ ಟ್ರೆಡ್‍ಮಿಲ್‍ನಲ್ಲಿ ನಡೆಯುತ್ತಿರುವ ಮಾಡೆಲ್‍ಗಳ ಕೆಲಸದ ಸಮಯ ಮತ್ತು ಅವರ ಸಂಬಳದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.ಇನ್ನು ಈ ವಿಡಿಯೊಗೆ ಸಿಕ್ಕಾಪಟ್ಟೆ ವ್ಯೂವ್ಸ್‌ ಬಂದಿವೆ. ಹಾಗೇ ಸಾಕಷ್ಟು ಜನರು ಕಾಮೆಂಟ್‌ ನೀಡಿದ್ದಾರೆ. “ಇದು ನನಗೆ ತುಂಬಾ ಇಷ್ಟವಾಗಿದೆ. ಇದರಿಂದ ವ್ಯಾಯಾಮಕ್ಕೆ ಹಣ ಪಾವತಿಸಬೇಕಾಗಿಲ್ಲ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ: ಎಮ್ಮೆ ನಿನಗೆ ಸಾಟಿ ಇಲ್ಲ… ಬರೀ ಡ್ರೈ ಫ್ರೂಟ್ಸ್‌ ತಿನ್ನೋ ಕೋಟಿ ಮೌಲ್ಯದ ಕಾಸ್ಟ್ಲೀ ಎಮ್ಮೆ ಇದು! ಇದರ ವಿಶೇಷತೆ ಏನ್‌ ಗೊತ್ತಾ?

“ನಾನು ಈ ಕಲ್ಪನೆಯನ್ನು ಇಷ್ಟಪಡುತ್ತೇನೆ. ಇದು ಒಳ್ಳೆಯ ಕೆಲಸ ಮತ್ತು ತುಂಬಾ ಆರೋಗ್ಯಕರ ಕೆಲಸ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ  ಮಾಲ್‍ನಲ್ಲಿ ಬಟ್ಟೆ ಪ್ರದರ್ಶನಕ್ಕೆ ಲೈವ್ ಮಾಡೆಲ್‍ಗಳನ್ನು ನೇಮಿಸಿಕೊಳ್ಳುವ ಆಲೋಚನೆ ಎಲ್ಲರಿಗೂ ಇಷ್ಟವಾಗಿಲ್ಲ. ಅನೇಕರು ಇದು ಉದ್ಯೋಗದ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕೆಲಸದಿಂದ ಅವರು ಟ್ರೆಡ್‌ಮಿಲ್‌ನಿಂದ ಬೀಳುವ ಸಾಧ್ಯತೆ ಇದೆ. ಅವರಿಗೆ ಯಾವುದೇ ಸುರಕ್ಷತಾ ಕ್ರಮವೂ ಇಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ.