ರಾಯ್ಪುರ: ಈಗ ಎಲ್ಲೆಡೆ ಸ್ಟ್ಯಾಂಡಪ್ ಕಾಮಿಡಿಗಳ (Stand-up comedy) ಹವಾ. ಯೂಟ್ಯೂಬ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ (Social Media) ಯುವ ಸ್ಟ್ಯಾಂಡಪ್ ಕಾಮಿಡಿಯನ್ಗಳಿಗೆ ಅವರದ್ದೇ ಆದ ಫ್ಯಾನ್ ಬೇಸ್ ಕೂಡಾ ಇದೆ. ಆದರೆ ಕೆಲವೊಮ್ಮೆ ಪ್ರೇಕ್ಷಕರನ್ನು ನಗಿಸುವ ಭರದಲ್ಲಿ ಅಶ್ಲೀಲ ಅಥವಾ ವಿವಾದಾತ್ಮಕ ಹಾಸ್ಯಗಳನ್ನು ಹೇಳುವ ಮೂಲಕ ಸ್ಟ್ಯಾಂಡಪ್ ಕಾಮಿಡಿಯನ್ಗಳು ತಾವೇ ಹಾಸ್ಯದ ವಸ್ತುವಾಗುತ್ತಾರೆ ಅಥವಾ ವಿವಾದದ ಕೇಂದ್ರಬಿಂದುವಾಗುತ್ತಾರೆ. ಅಂತದ್ದೇ ಒಂದು ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗುತ್ತಿದೆ.
ಯಶ್ ರಾಟಿ (Yash Rathi) ಎಂಬ ಸ್ಟ್ಯಾಂಡಪ್ ಕಾಮಿಡಿಯನ್ ಛತ್ತಿಸ್ಗಢದ ಭಿಲಾಯ್ ಐಐಟಿಯಲ್ಲಿ (Indian Institute of Technology (IIT) Bhilai) ನಡೆದ ಕಾರ್ಯಕ್ರಮವೊಂದರಲ್ಲಿ ಅಶ್ಲೀಲ ಜೋಕ್ ಹೇಳಿದ್ದು ಈ ಸಂದರ್ಭದಲ್ಲಿ ಸಭೆಯಲ್ಲಿ ಕುಳಿತಿದ್ದ ಪ್ರೊಫೆಸರ್ ಒಬ್ಬರು ಇದನ್ನು ಕೇಳಿ ಕಿವಿ ಮುಚ್ಚಿಕೊಂಡಿರುವ ವಿಡಿಯೊ ಇದೀಗ ಎಲ್ಲಡೆ ವೈರಲ್ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ ಮತ್ತು ಈ ಯಡವಟ್ಟಿನಿಂದಾಗಿ ಯಶ್ ಮೇಲೆ ಒಂದು ಎಫ್.ಐ.ಆರ್. ಸಹ ದಾಖಲಾಗಿದೆ.
ನ. 15ರಂದು ಭಿಲಾಯ್ ಐಐಟಿಯ ವಾರ್ಷೀಕೋತ್ಸವ ಕಾರ್ಯಕ್ರಮದಲ್ಲಿ ಯಶ್, ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಸಂಸ್ಥೆಯ ಸಿಬ್ಬಂದಿಗಾಗಿ ಸ್ಟ್ಯಾಂಡಪ್ ಕಾಮಿಡಿ ನಡೆಸಿಕೊಡುತ್ತಿದ್ದ ಸಂದರ್ಭದಲ್ಲಿ ಈ ಅವಾಂತರ ಉಂಟಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಕಾಮಿಡಿ ಕಾರ್ಯಕ್ರಮದ ಶಾರ್ಟ್ ವಿಡಿಯೊದ ಆಧಾರದಲ್ಲಿ ಭಾರತೀಯ ಜನತಾ ಯುವಮೋರ್ಚಾ (BJYM), ದಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಕರ್ಣಿ ಸೇನಾ ಸಂಘಟನೆ ಐಐಟಿ ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ದೂರು ಸಲ್ಲಿಸಿದೆ ಎಂದು ತಿಳಿದುಬಂದಿದೆ.
ಇದೀಗ ವೈರಲ್ ಆಗುತ್ತಿರುವ ಇನ್ನೊಂದು ವಿಡಿಯೊದಲ್ಲಿ ಸಭೆಯಲ್ಲಿದ್ದ ಪ್ರೋಫೆಸರ್ ಒಬ್ಬರು ಈ ಅಶ್ಲೀಲ ಜೋಕನ್ನು ಕೇಳಲಾಗದೆ ತಮ್ಮ ಎರಡೂ ಕಿವಿಗಳನ್ನು ಮುಚ್ಚಿಕೊಂಡಿರುವುದು ರೆಕಾರ್ಡ್ ಆಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
ರಾಟಿ ತನ್ನ ಕಾಮಿಡಿ ಶೋ ಮುಂದುವರಿಸುತ್ತಿದ್ದಂತೆ ಈ ಐಐಟಿಯ ಪ್ರೊಫೆಸರ್ ಆಗಿರುವ ವ್ಯಕ್ತಿ ತಮ್ಮ ಕೈ ಬೆರಳುಗಳಿಂದ ಕಿವಿಯನ್ನು ಮುಚ್ಚಿಕೊಂಡಿರುವುದನ್ನು ನಾವು ಕಾಣಬಹುದಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 296 (ಅಸಂಬದ್ಧ ಪದಗಳ ಬಳಕೆ ಅಥವಾ ಕ್ರಿಯೆಗಳನ್ನು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಸ್.ಪಿ. ಜಿತೇಂದ್ರ ಶುಕ್ಷ, ಈ ಪ್ರಕರಣದಲ್ಲಿ ಆರೋಪಿಗೆ ಮೂರು ತಿಂಗಳು ಜೈಲು ಶಿಕ್ಷೆ ಅಥವಾ ಒಂದು ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Post: ಆರಾಧ್ಯ ಬರ್ತ್ ಡೇಗೆ ಅಭಿಷೇಕ್ ಗೈರು: ಬಚ್ಚನ್ ಫ್ಯಾಮಿಲಿಯಿಂದ ಐಶು ದೂರ ಆಗಿರೋದು ಗ್ಯಾರಂಟಿನಾ? ವೈರಲ್ ಪೋಸ್ಟ್ನಲ್ಲೇನಿದೆ?
ಐಐಟಿ ಆಡಳಿತ ಮಂಡಳಿಯೂ ಸಹ ಯಶ್ ವಿರುದ್ಧ ಪ್ರಕರಣವನ್ನು ದಾಖಲಿಸಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
“ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ರಾಟಿ ಅಸಂಬಂಧ ಪದಗಳನ್ನು ಬಳಸಲು ಪ್ರಾರಂಭಿಸಿದಾಗ ಸಂಸ್ಥೆಯ ಆಡಳಿತ ಮಂಡಳಿಯವರು ಮಧ್ಯ ಪ್ರವೇಶಿಸಿ ಆತನನ್ನು ವೇದಿಕೆಯಿಂದ ಕೆಳಗೆ ಇಳಿಯುವಂತೆ ಸೂಚಿಸಿದ್ದಾರೆ. ಈ ಹಿಂದೆಯೂ ಸಂಸ್ಥೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಸ್ಟ್ಯಾಂಡಪ್ ಕಾಮಿಡಿಗಳು ನಡೆದಿವೆ. ಆದರೆ ಹಿಂದೆ ಹೀಗೆ ಎಂದೂ ಆಗಿರಲಿಲ್ಲ. ರಾಟಿ ಈ ರೀತಿಯ ಪದಗಳನ್ನು ಬಳಸಿದಾಗ ನಮಗೆ ಶಾಕ್ ಆಯ್ತು” ಎಂದು ಐಐಟಿ ಭಿಲಾಯ್ನ ನಿರ್ದೇಶಕರಾಗಿರುವ ರಾಜೀವ್ ಪ್ರಕಾಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯ ಬಳಿಕ ಸಂಸ್ಥೆಯ ವಾರ್ಷಿಕ ಸಮಾರಂಭದಲ್ಲಿ ಇನ್ನು ಮುಂದೆ ಸ್ಟ್ಯಾಂಡಪ್ ಕಾಮಿಡಿ ಕಾರ್ಯಕ್ರಮಗಳಿಗೆ ಅವಕಾಶ ಕೊಡದಿರಲು ತೀರ್ಮಾನಿಸಲಾಗಿದೆ ಎಂದೂ ಪ್ರಕಾಶ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಆದರೆ ಈ ವಿವಾದಕ್ಕೆ ಸಂಬಂಧಿಸಿದಂತೆ ಯಶ್ ರಾಟಿ ಪ್ರತಿಕ್ರಿಯೆ ಇನ್ನೂ ಸಿಕ್ಕಿಲ್ಲ.