Wednesday, 11th December 2024

Viral Video: ಮಲಗಿದ್ದ ನಾಯಿಮರಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ದುರುಳರು

Viral Video

ದಿನದಿಂದ ದಿನಕ್ಕೆ ಮನುಷ್ಯರಲ್ಲಿ ಮನುಷ್ಯತ್ವ ಎನ್ನುವುದು ಮರೆಯಾಗಿ ಹೋಗುತ್ತಿದೆ. ಇದೀಗ ಅಂತಹದೊಂದು ಆಘಾತಕಾರಿ ಘಟನೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ಮನೆಯ ಹೊರಗೆ ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿಮರಿಯ ಮೇಲೆ ಕಾರು ಹತ್ತಿಸಿ ಅದನ್ನು  ಕ್ರೂರವಾಗಿ ಸಾಯಿಸಿದ್ದಾನೆ. ಅಷ್ಟೇ ಅಲ್ಲದೇ ಜೀವ ಹೋಗುವ ಸಂಕಷ್ಟದಲ್ಲಿ ನರಳುತ್ತಿದ್ದ ಅದಕ್ಕೆ ಒಂದು ಹನಿ ನೀರನ್ನೂ ನೀಡದೆ ಮನೆಯಿಂದ ಹೊರಗೆ ಬಂದ ಮತ್ತೊಬ್ಬ ವ್ಯಕ್ತಿ ಅದನ್ನು ಪೊದೆಗೆ ಎಸೆದಿದ್ದಾನೆ. ಇಡೀ ಘಟನೆಯು ಮನೆಯ ಹೊರಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ನಾಯಿಮರಿ ನೋವಿನಿಂದ ಕೂಗುತ್ತಿರುವುದನ್ನು ಕೇಳಿದ ನೆರೆಹೊರೆಯವರು ತಮ್ಮ ಮನೆಯಿಂದ ಹೊರಬಂದು ನಾಯಿಮರಿಯ ಸ್ಥಿತಿ ನೋಡಿ ವ್ಯಕ್ತಿಯ ವಿರುದ್ಧ ಕಿಡಿಕಾರಿದ್ದಾರೆ. ಹಾಗೇ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಂಡಿದ್ದು, ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:ಇವು ಭಾರತದ ಅತ್ಯಂತ ಜನದಟ್ಟಣೆಯ ನಗರಗಳಂತೆ!

ಆರೋಪಿಗಳನ್ನು ಕುಶಾಗ್ರ ಮತ್ತು ಸೂರ್ಯಾಂಶ್ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಆ ಪ್ರದೇಶದ ನಿವಾಸಿಗಳಾಗಿದ್ದಾರೆ. ಘಟನೆಯ ಆರೋಪಿಗಳ ವಿರುದ್ಧ ಜನ ತೀವ್ರವಾಗಿ ಪ್ರತಿಭಟಿಸಿದ್ದಾರೆ. ಇನ್ನು ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿದ ಪೊಲೀಸರು, “ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೆಕ್ಷನ್ 325 ಬಿಎನ್ಎಸ್ ಅಡಿಯಲ್ಲಿ ಎಫ್ಐಆರ್ ಸಂಖ್ಯೆ 217/24 ಅನ್ನು ದಾಖಲಿಸಿದ್ದಾರೆ ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.