Wednesday, 11th December 2024

Viral Video: ಮೊಸಳೆ ಜೊತೆ ಸ್ಕೂಟರ್‌ನಲ್ಲಿ ಜಾಲಿ ರೈಡ್‌; ಯುವಕರ ಸಾಹಸ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ!

Viral Video

ವಡೋದರಾ: ಪ್ರವಾಹ ಪೀಡಿತ  ಗುಜರಾತ್‌ನ ವಡೋದರಾ(Vadodara Flood)ದಲ್ಲಿ ನೀರು ತಗ್ಗುತ್ತಿದ್ದಂತೆ ಸುಮಾರು ಸಂಖ್ಯೆಯಲ್ಲಿ ಮೊಸಳೆಗಳು(Crocodile) ಜನ ನಿಬಿಡ ಪ್ರದೇಶಗಳಿಗೆ ನುಗ್ಗುತ್ತಿವೆ. ಎಲ್ಲೆಂದರಲ್ಲಿ ಮೊಸಳೆಗಳು ಕಾಣ ಸಿಗುತ್ತಿರುವುದು ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮೊಸಲೆಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಿರುವಾಗ ಇಲ್ಲಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ. ರಕ್ಷಣಾ ಕಾರ್ಯಾಚರಣೆಯ ನಡುವೆ ಇಬ್ಬರು ವ್ಯಕ್ತಿಗಳು ಸ್ಕೂಟರ್‌ನಲ್ಲಿ ಮೊಸಳೆಯನ್ನು ಸಾಗಿಸುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ಒಬ್ಬ ವ್ಯಕ್ತಿ ಸ್ಕೂಟರ್ ಅನ್ನು ಓಡಿಸುತ್ತಿದ್ದು, ಮತ್ತೊರ್ವ ಸವಾರ ಮೊಸಳೆಯನ್ನು ಅಡ್ಡಲಾಗಿ ಹಿಡಿದು ಜಾಲಿ ರೈಡ್‌ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇಬ್ಬರನ್ನು ಸಂದೀಪ್ ಠಾಕೂರ್ ಮತ್ತು ರಾಜ್ ಭಾವಸರ್ ಎಂದು ಗುರುತಿಸಲಾಗಿದೆ. ವಡೋದರದ ಮಂಜಲ್‌ಪುರದಲ್ಲಿ ಪ್ರಾಣಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅವರು ಮೊಸಳೆಯನ್ನು ಹಸ್ತಾಂತರಿಸಲು ಅರಣ್ಯ ಇಲಾಖೆ ಕಚೇರಿಗೆ ತೆರಳುತ್ತಿದ್ದ ವೇಳೆ ವಿಡಿಯೋ ರೆಕಾರ್ಡ್‌ ಆಗಿದೆ ಎನ್ನಲಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ:  https://x.com/TimesNow/status/1830165040713851302

ವಡೋದರಾ ವಿಶ್ವಾಮಿತ್ರಿ ನದಿಯ ದಡದಲ್ಲಿದೆ, ಇದು ಹೆಚ್ಚಿನ ಸಂಖ್ಯೆಯ ಮೊಸಳೆಗಳಿಗೆ ನೆಲೆಯಾಗಿದೆ. ಭೀಕರ ಪ್ರವಾಹದ ನಂತರ ಮೊಸಳೆ ಹಾಗೂ ವನ್ಯ ಜೀವಿಗಳು  ಅನೇಕ ವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಪ್ರವಾಹದ ನಂತರ ನಗರದ ಪ್ರದೇಶಗಳಲ್ಲಿ 40 ಮೊಸಳೆಗಳು ಕಂಡುಬಂದಿವೆ ಎಂದು ವಡೋದರಾ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಗ್ನಿಶ್ವರ್ ವ್ಯಾಸ್‌ ಮಾಹಿತಿ ನೀಡಿದ್ದಾರೆ. ನಾವು ಇದುವರೆಗೆ 33 ಮೊಸಳೆಗಳನ್ನು ರಕ್ಷಿಸಿ ಸುರಕ್ಷಿತವಾಗಿ ಅವುಗಳ ವಾಸಸ್ಥಳಕ್ಕೆ ಬಿಟ್ಟಿದ್ದೇವೆ. ಇನ್ನು ಐದು ಮೊಸಳೆಗಳು ರಕ್ಷಣಾ ಕೇಂದ್ರದಲ್ಲಿದ್ದಾರೆ. ಎರಡು ಮೊಸಳೆಗಳು ಆಕಸ್ಮಿಕವಾಗಿ ಸಾವನ್ನಪ್ಪಿವೆ ಎಂದು ಮಾಹಿತಿ ನೀಡಿದ್ದಾರೆ.

ನಾವು ಅರಣ್ಯ ಇಲಾಖೆ ಸಿಬ್ಬಂದಿ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುವ ಎನ್‌ಜಿಒಗಳು ಮತ್ತು ಸ್ವಯಂಸೇವಕರ ತಂಡಗಳನ್ನು ರಚಿಸಿದ್ದೇವೆ. ನಮಗೆ ಸಹಾಯವಾಣಿಗೆ ಕರೆ ಬಂದಾಗ, ಹತ್ತಿರದ ತಂಡವು ಸ್ಥಳಕ್ಕೆ ಧಾವಿಸಿ ಪ್ರಾಣಿಯನ್ನು ರಕ್ಷಿಸಲು ಪ್ರಯತ್ನಿಸುತ್ತದೆ. ಇದು ಸವಾಲಿನ ಕೆಲಸ. ಮೊಸಳೆಗಳು ಮಾಂಸಾಹಾರಿಗಳು ಮತ್ತು ಶಕ್ತಿಶಾಲಿ ಉಭಯಚರಿ ಜೀವಿ.  ಅವುಗಳನ್ನು ನಿಯಂತ್ರಿಸುವುದು ಬಹಳ ಕಷ್ಟದ ಕೆಲಸ. ಅರಣ್ಯ ಇಲಾಖೆಯು ನದಿಯ ಸಮೀಪವಿರುವ ವಸತಿ ಪ್ರದೇಶಗಳಿಂದ ಹಾವು ಮತ್ತು ಆಮೆಗಳನ್ನೂ ರಕ್ಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಏತನ್ಮಧ್ಯೆ, ಭೀಕರ ಪ್ರವಾಹದ ನಂತರ ರಾಜ್ಯವು ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ರಾಜ್ಯ ಸರ್ಕಾರ ವಿವಿಧ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಿದೆ. ರಸ್ತೆಗಳ ದುರಸ್ತಿ ಹಾಗೂ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.