Saturday, 14th December 2024

Viral Video: ಅಶ್ಲೀಲ ಕಾಮೆಂಟ್ ಮಾಡಿದ ಹುಡುಗನಿಗೆ ಹುಡುಗಿ ಕೊಟ್ಟ ಶಿಕ್ಷೆ ಏನು ನೋಡಿ!

Viral Video

ರಸ್ತೆಯಲ್ಲಿ, ಕಾಲೇಜಿನ ಕ್ಯಾಂಪಸ್‍ನಲ್ಲಿ, ಥಿಯೇಟರ್, ಮಾಲ್ ಮುಂತಾದ ಕಡೆಯಲ್ಲಿ ಹುಡುಗಿಯರು ನಡೆದು ಹೋಗುತ್ತಿರುವುದನ್ನು ನೋಡಿದರೆ ಸಾಕು ಹುಡುಗರು ಹಿಂದೆ ಬಂದು ಚುಡಾಯಿಸಲು ಶುರು ಮಾಡುತ್ತಾರೆ. ಇದರಿಂದ ಕೆಲವು ಹುಡುಗಿಯರು ಹೆದರಿ ಓಡುತ್ತಾರೆ. ಆದರೆ ಕೆಲವು ಹುಡುಗಿಯರು ಹುಡುಗರ ಜೊತೆ ಜಗಳಕ್ಕೆ ನಿಂತು ಬಿಡುತ್ತಾರೆ. ಆದರೆ ಇಲ್ಲೊಬ್ಬ ಹುಡುಗಿ ತನ್ನನ್ನು ಚುಡಾಯಿಸಿದ ಹುಡುಗನಿಗೆ ಏನು ಮಾಡಿದಳು ಎಂದು ತಿಳಿದರೆ ನೀವೇ ಶಾಕ್ ಆಗ್ತೀರಾ? ಅಂತಹ ಧೈರ್ಯ ಎಲ್ಲಾ ಹುಡುಗಿಯರಲ್ಲಿ ಇದ್ದರೆ ಹೆಣ್ಣಿನ ಮೇಲಿನ ಶೋಷಣೆ ಕೊನೆಯಾಗುವುದು ಖಂಡಿತ. ಹುಡುಗಿಯು ಚುಡಾಯಿಸಿದ ಹುಡುಗನಿಗೆ ತಕ್ಕ ಶಿಕ್ಷೆ ನೀಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ಈ ಘಟನೆ ಬಿಹಾರದ ಶೇಖ್ಪುರ ಜಿಲ್ಲೆಯಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ. ಈ ವಿಡಿಯೊದಲ್ಲಿ ಹುಡುಗಿಯೊಬ್ಬಳು ಹುಡುಗನನ್ನು ಕೋಲಿನಿಂದ ಸರಿಯಾಗಿ ಹೊಡೆಯುತ್ತಿದ್ದಾಳೆ. ಹುಡುಗಿ ದಾರಿಯಲ್ಲಿ ನಡೆದು ಬರುವಾಗ ಆತ ಆಕೆಯನ್ನು ಅಶ್ಲೀಲವಾಗಿ ಟೀಕಿಸಲು ಶುರು ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಹುಡುಗಿ ಧೈರ್ಯದಿಂದ ಹುಡುಗ ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ನೀಡಿದ್ದಾಳೆ. ಅದೇನೆಂದರೆ ಅಲ್ಲೇ ಇದ್ದ ಕೋಲನ್ನು ತೆಗೆದುಕೊಂಡು ಹುಡುಗನಿಗೆ ಮನಬಂದಂತೆ ಹೊಡೆದಿದ್ದಾಳೆ. ಆ ಹೊಡೆತದಿಂದ ನರಳುತ್ತಿದ್ದ ಹುಡುಗನ ಪಾಡು ಹೇಳತೀರದು. ನೋವನ್ನು ಸಹಿಸಲಾರದೆ ಕಷ್ಟಪಟ್ಟು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. 41 ಸೆಕೆಂಡುಗಳ ಈ ವಿಡಿಯೊ ಹಲವರ ಗಮನ ಸೆಳೆದಿದೆ. ಹಾಗಾಗಿ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಘಟನಾ ಸ್ಥಳದಲ್ಲಿದ್ದ ಕೆಲವರು ಈ ಕೃತ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದರೆ ಇನ್ನೂ ಕೆಲವರು ಹುಡುಗನಿಗೆ ತಕ್ಕ ಪಾಠ ಕಲಿಸುತ್ತಿರುವ ಹುಡುಗಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಹುಡುಗಿಯ ಈ ಧೈರ್ಯಶಾಲಿ ಕೆಲಸಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅವಹೇಳನಕಾರಿ ಕಾಮೆಂಟ್ ಮಾಡಿದರೂ ಧೃತಿಗೆಡದೆ ಧೈರ್ಯದಿಂದ ಹೋರಾಡಿದ ಅವಳ ಧೈರ್ಯವನ್ನು ಕಂಡು ಅನೇಕರು ಹೊಗಳಿದ್ದಾರೆ.

ಮಾಹಿತಿಯ ಪ್ರಕಾರ, ಈ ಇಡೀ ಪ್ರಕರಣವು ಶೇಖ್ಪುರ ಜಿಲ್ಲೆಯ ಶೇಖೋಪುರ ಸರಾಯ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹುಡುಗಿಯರು ಯಾವುದೋ ಕೆಲಸಕ್ಕಾಗಿ ಮಾರುಕಟ್ಟೆಗೆ ಹೋಗಿದ್ದರು. ಇಬ್ಬರು ಹುಡುಗಿಯರು ಕೆಲಸ ಮುಗಿಸಿ ತಮ್ಮ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ, ನೆರೆಯ ಸುಗಿಯಾ ಗ್ರಾಮದ ಹುಡುಗ ಹುಡುಗಿಯರನ್ನು ಹಿಂಬಾಲಿಸಲು ಪ್ರಾರಂಭಿಸಿದನು. ಆತ ಹುಡುಗಿಯರನ್ನು ಹಿಂಬಾಲಿಸುವುದಲ್ಲದೆ ಅಶ್ಲೀಲ ಕಾಮೆಂಟ್ ಮಾಡಿದ್ದಾನೆ. ಹುಡುಗಿಯರು ಅದಕ್ಕೆ ಪ್ರತಿಕ್ರಿಯಿಸದಿದ್ದಾಗ, ಹುಡುಗ ಅವರಿಗೆ ಕಿರುಕುಳ ನೀಡಲು ಪ್ರಾರಂಭಿಸಿದನು.ಈ ಸಮಯದಲ್ಲಿ, ಇಬ್ಬರೂ ಹುಡುಗಿಯರು ನಿಮಿ ಗ್ರಾಮವನ್ನು ತಲುಪಿದ್ದರು. ಈ ಹುಡುಗಿಯರಲ್ಲಿ ಒಬ್ಬಳು ಹತ್ತಿರದಲ್ಲಿ ನಿಂತಿದ್ದ ವೃದ್ಧನಿಗೆ ಇಡೀ ವಿಷಯವನ್ನು ಹೇಳಿದಳು.

ಈ ಸಮಯದಲ್ಲಿ, ಗ್ರಾಮದ ಕೆಲವು ಜನರು ಸಹ ಅಲ್ಲಿಗೆ ಬಂದಿದ್ದಾರೆ. ಆಗ ಗ್ರಾಮಸ್ಥರು ಹುಡುಗಿಗೆ ಕೋಲನ್ನು ನೀಡಿ ಯುವಕನನ್ನು ಹೊಡೆಯುವಂತೆ ಹೇಳಿದರು. ಇದರ ನಂತರ, ಹುಡುಗಿ ಕೋಲಿನಿಂದ ಹುಡುಗನನ್ನು ಮನಬಂದಂತೆ ಥಳಿಸಿದ್ದಾಳೆ. ಈ ಸಮಯದಲ್ಲಿ, ಅಲ್ಲಿದ್ದ ಜನರು ಘಟನೆಯನ್ನು ವಿಡಿಯೊ ಮಾಡಿದ್ದಾರೆ. ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿ ಪೊಲೀಸ್ ಠಾಣೆಗೆ ಕರೆದೊಯ್ದರು, ಅಲ್ಲಿ ಎರಡೂ ಕಡೆಯವರ ನಡುವಿನ ರಾಜಿ ನಂತರ ಹುಡುಗನನ್ನು ಬಿಡುಗಡೆ ಮಾಡಲಾಯಿತು ಎನ್ನಲಾಗಿದೆ.

ವಿಡಿಯೊಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ
https://x.com/ManojSh28986262/status/1830371070932652209