Thursday, 3rd October 2024

WhatsApp chat: ನಿಮ್ಮ ವಾಟ್ಸ್‌ಆಪ್ ಚಾಟ್‌ಗಳು ಸುರಕ್ಷಿತವಾಗಿದೆಯೆ? ಖಚಿತಪಡಿಸಿಕೊಳ್ಳಲು ಹೀಗೆ ಮಾಡಿ

WhatsApp chat

ವಿವಿಧ ರೀತಿಯಲ್ಲಿ ಸಂದೇಶಗಳನ್ನು (message app) ಕಳುಹಿಸಲು ಸಂವಹನದ ಪ್ರಮುಖ ಮಾಧ್ಯಮವಾಗಿ ವಾಟ್ಸ್‌ಆಪ್ (WhatsApp chat) ಅನ್ನು ಇಂದು ಕೋಟ್ಯಂತರ ಜನರು ಬಳಸುತ್ತಿದ್ದಾರೆ. ಪ್ರತಿಯೊಬ್ಬರಿಂದಲೂ ಇನ್ನೊಬ್ಬರಿಗೆ ದಿನಕ್ಕೆ ನೂರಾರು ಸಂದೇಶಗಳು ರವಾನೆಯಾಗುತ್ತದೆ. ಇದರಲ್ಲಿ ಹಲವು ಗೌಪ್ಯ ಮಾಹಿತಿಗಳೂ ಸೇರಿರುತ್ತವೆ. ಕೆಲವೊಮ್ಮೆ ವಾಟ್ಸ್‌ಆಪ್‌ನಲ್ಲಿ ನಮ್ಮ ಚಾಟ್‌ಗಳು ಸುರಕ್ಷಿತವಾಗಿರುತ್ತವೆಯೇ ಎನ್ನುವ ಪ್ರಶ್ನೆ ಕಾಡುವುದು ಸಹಜ. ವಾಟ್ಸ್‌ಆಪ್‌ನಲ್ಲಿ ನಮ್ಮ ಚಾಟ್‌ಗಳನ್ನು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿರಿಸಲು ಹಲವು ದಾರಿಗಳಿವೆ. ಇದನ್ನು ಖಚಿತಪಡಿಸಿಕೊಳ್ಳುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

ಎರಡು ಹಂತದ ಪರಿಶೀಲನೆ

ನಿಮ್ಮ ಚಾಟ್‌ಗಳು ಹೆಚ್ಚು ಸುಭದ್ರವಾಗಿರಲು ವಾಟ್ಸ್‌ಆಪ್‌ಗೆ ನೋಂದಾಯಿಸಿಕೊಳ್ಳುವಾಗ ಎಸ್‌ಎಂಎಸ್‌ ಪರಿಶೀಲನಾ ಕೋಡ್‌ನೊಂದಿಗೆ ಆರು-ಅಂಕಿಯ ಪಿನ್ ಕೂಡ ನೀಡಿ. ಇದು ಹೆಚ್ಚಿನ ಭದ್ರತೆಯನ್ನು ನಿಮಗೆ ಒದಗಿಸುತ್ತದೆ. ಇಲ್ಲಿ ಪಿನ್ ನೀಡುವಾಗ ಸುಲಭವಾಗಿ ಊಹಿಸಲು ಸಾಧ್ಯವಾಗದಂತಹ ಬಲವಾದ ಮತ್ತು ವಿಶಿಷ್ಟವಾದ ಪಿನ್ ಅನ್ನು ನೀಡಲು ಮರೆಯಬೇಡಿ.

ಫಿಂಗರ್‌ಪ್ರಿಂಟ್, ಫೇಸ್ ಐಡಿ ಲಾಕ್

ಚಾಟ್‌ಗಳಲ್ಲಿ ಯಾರೂ ನಿಮ್ಮತ್ತ ಇಣುಕಿ ನೋಡದೇ ಇರಲು ಫೋನ್ ಅನ್‌ಲಾಕ್ ಆಗಿದ್ದರೂ ವಾಟ್ಸ್‌ಆಪ್‌ಗೆ ಅನಧಿಕೃತ ಪ್ರವೇಶವನ್ನು ತಡೆಯಲು ಫೋನ್‌ನಲ್ಲಿ ಫಿಂಗರ್‌ಪ್ರಿಂಟ್ ಅಥವಾ ಫೇಸ್ ಐಡಿ ಲಾಕ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿ. ಇದು ಭದ್ರತೆಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ನೀವು ನಿಮ್ಮ ಫೋನ್ ಅನ್ನು ಎಲ್ಲಾದರೂ ಮರೆತು ಬಂದರೆ ನಿಮ್ಮ ಚಾಟ್‌ಗಳನ್ನು ಇದು ಹೆಚ್ಚು ಸುರಕ್ಷಿತವಾಗಿರಿಸುತ್ತದೆ.

ಮಾಹಿತಿ ನಿಯಂತ್ರಣ

ಪ್ರತಿಯೊಬ್ಬರೂ ನಿಮ್ಮ “ಕೊನೆಯದಾಗಿ ನೋಡಿದ” ಅಥವಾ ಪ್ರೊಫೈಲ್ ಚಿತ್ರವನ್ನು ನೋಡಬೇಕಾಗಿಲ್ಲ. ಗೌಪ್ಯತೆ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ ನಿಮ್ಮ ಪ್ರೊಫೈಲ್ ಮಾಹಿತಿ, ಸ್ಥಿತಿ ನವೀಕರಣ ಮತ್ತು ಕೊನೆಯದಾಗಿ ನೋಡಿದ ಸ್ಥಿತಿಯನ್ನು ಯಾರು ಪ್ರವೇಶಿಸಬಹುದು ಎಂಬುದನ್ನು ಕಸ್ಟಮೈಸ್ ಮಾಡಿ. ಅವುಗಳನ್ನು ಕೇವಲ ನಿಮ್ಮ ಸಂಪರ್ಕಗಳಿಗೆ ಸೀಮಿತವಾಗಿರಿಸಲು ಅಥವಾ ಗರಿಷ್ಠ ಗೌಪ್ಯತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.

WhatsApp chat

ಅನುಮಾನಾಸ್ಪದ ಲಿಂಕ್‌ಗಳ ಬಗ್ಗೆ ಎಚ್ಚರ

ಯಾವುದೇ ಅನುಮಾನಾಸ್ಪದ ಲಿಂಕ್‌ಗಳು ಬಂದರೆ ಅದನ್ನು ತೆರೆಯಲು ಹೋಗಬೇಡಿ. ಇದು ಮೋಸಗೊಳಿಸುವ ತಂತ್ರವಾಗಿರಬಹುದು. ಅಪರಿಚಿತ ಸಂಖ್ಯೆಗಳಿಂದ ಬರುವ ಸಂದೇಶ, ತುರ್ತು ವಿನಂತಿ ಅಥವಾ ನಂಬಲಾಗದ ಕೊಡುಗೆಗಳ ಬಗ್ಗೆ ಜಾಗರೂಕರಾಗಿರಿ.

Apple Intelligence: ಐಫೋನ್, ಐಪ್ಯಾಡ್, ಮ್ಯಾಕ್‌ನಲ್ಲಿ ಶೀಘ್ರವೇ ಲಭ್ಯವಾಗಲಿದೆ ಆಪಲ್ ಇಂಟೆಲಿಜೆನ್ಸ್!

ಲಿಂಕ್‌ಗಳನ್ನು ಪರಿಶೀಲಿಸಿ

ಖಾತೆಯು ಎಲ್ಲಿ ಸಕ್ರಿಯವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರಸ್ತುತ ನಿಮ್ಮ ಖಾತೆಗೆ ಲಾಗ್ ಇನ್ ಆಗಿರುವ ಎಲ್ಲಾ ಸಾಧನಗಳ ಪಟ್ಟಿಯನ್ನು ವೀಕ್ಷಿಸಲು ವಾಟ್ಸ್‌ಆಪ್‌ನಲ್ಲಿ ಅನುಮತಿ ಇದೆ. ಪರಿಚಯವಿಲ್ಲದ ಸಾಧನವನ್ನು ಗಮನಿಸಿದರೆ ಅನಧಿಕೃತ ಪ್ರವೇಶವನ್ನು ತಡೆಯಲು ಅದನ್ನು ಕೂಡಲೇ ಲಾಗ್ ಔಟ್ ಮಾಡಬಹುದು. ಲಿಂಕ್ ಮಾಡಲಾದ ಸಾಧನಗಳ ಬಗ್ಗೆ ನಿರಂತರವಾಗಿ ಪರಿಶೀಲಿಸುವುದು ಉತ್ತಮ.