Wednesday, 11th December 2024

Stock Market Scam: ಅಸ್ಸಾಂನಲ್ಲಿ 2,200 ಕೋಟಿ ರೂ.ಗಳ ಬೃಹತ್‌ ಹಗರಣ ಬಯಲು; 22 ವರ್ಷದ ಮಾಸ್ಟರ್‌ ಮೈಂಡ್‌ ಅರೆಸ್ಟ್‌

Stock Market Scam

ದಿಸ್‌ಪುರ: ಅಸ್ಸಾಂ ಪೊಲೀಸರು 2,200 ಕೋಟಿ ರೂ. ಮೊತ್ತದ ಬೃಹತ್‌ ಷೇರು ಮಾರುಕಟ್ಟೆ ವಂಚನೆಯನ್ನು ಬಯಲಿಗೆಳೆದಿದ್ದು(Stock Market Scam), ಇದರ ಮಾಸ್ಟರ್‌ ಮೈಂಡ್‌ 22 ವರ್ಷದ ಸ್ಟಾಕ್‌ ಟ್ರೇಡರ್‌ ಬಿಶಾಲ್‌ ಫುಕಾನ್‌ (Bishal Phukan) ಎಂಬಾತನನ್ನು ಬಂಧಿಸಿದ್ದಾರೆ. ದಿಬ್ರುಗಢ ಮೂಲದ ಬಿಶಾಲ್‌ ಫುಕಾನ್ ಕೇವಲ 60 ದಿನಗಳಲ್ಲಿ ಶೇ. 30ರಷ್ಟು ಲಾಭ ನೀಡುವುದಾಗಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಹೂಡಿಕೆದಾರರಿಗೆ ಆಮಿಷ ಒಡ್ಡಿ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ʼʼಹೂಡಿಕೆದಾರರಿಗೆ ವಂಚಿಸುತ್ತಿದ್ದ ಬಿಶಾಲ್‌ ಫುಕಾನ್ ಎಂಬಾತನನ್ನು ಬಂಧಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತನಿಖೆ ವೇಳೆ  ಫುಕಾನ್ ತನ್ನ ಮೋಸದ ಚಟುವಟಿಕೆಗಳ ಮೂಲಕ ಫಾರ್ಮಾಸ್ಯುಟಿಕಲ್ಸ್, ಉತ್ಪಾದನೆ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ನಾಲ್ಕು ಕಂಪನಿಗಳನ್ನು ಸ್ಥಾಪಿಸಿರುವುದು ಪತ್ತೆಯಾಗಿದೆ. ಮಾತ್ರವಲ್ಲ ಅಸ್ಸಾಮಿ ಚಲನಚಿತ್ರೋದ್ಯಮದಲ್ಲಿಯೂ ಹೂಡಿಕೆ ಮಾಡಿದ್ದಾನೆ. ಕೋಟ್ಯಂತರ ಮೌಲ್ಯದ ಆಸ್ತಿಗಳ ದಾಖಲೆಗಳನ್ನು ಆತನ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ. ಗುವಾಹಟಿಯಲ್ಲಿ ಮಹತ್ವದ ಷೇರು ವಂಚನೆ ಪ್ರಕರಣ ಬೆಳಕಿಗೆ ಬಂದ ನಂತರ ಈತನ ಬಂಡವಾಳವೂ ಹೊರ ಬಿದ್ದಿದೆ.

ಡಿಬಿ ಸ್ಟಾಕ್ ಬ್ರೋಕಿಂಗ್ ಕಂಪನಿಯ ಮಾಲೀಕ ದೀಪಂಕರ್ ಬರ್ಮನ್ ಅನುಮಾಸ್ಪದವಾಗಿ ನಾಪತ್ತೆಯಾದ ನಂತರ ನಡೆದ ತನಿಖೆ  ವೇಳೆ ಫುಕಾನ್ ಬಗ್ಗೆ ಸಂಶಯ ಮೂಡಿತ್ತು. ಪೊಲೀಸರು ತನ್ನ ಚಟುವಟಿಕೆಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ ಕೂಡಲೇ ಬಿಶಾಲ್ ಫೇಸ್‌ಬುಕ್‌ನಲ್ಲಿ ಹೂಡಿಕೆದಾರರಿಗೆ  ಹಣವನ್ನು ಹಿಂದಿರುಗಿಸಿದ್ದೇನೆ ಎಂದು ಹೇಳಿಕೊಂಡಿದ್ದ. ಅದಾಗ್ಯೂ  ದಿಬ್ರುಗಢ ಪೊಲೀಸರು ಸೆಪ್ಟೆಂಬರ್ 2ರ ರಾತ್ರಿ ಫುಕಾನ್ ನಿವಾಸದ ಮೇಲೆ ದಾಳಿ ನಡೆಸಿ ಮ್ಯಾನೇಜರ್ ಬಿಪ್ಲಾಬ್ ಜತೆಗೆ ಆತನನ್ನೂ ಬಂಧಿಸಿದ್ದಾರೆ. ಇಬ್ಬರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ.

ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಫುಕಾನ್‌ನೊಂದಿಗೆ ಸಂಪರ್ಕ ಹೊಂದಿರುವ ಅಸ್ಸಾಮಿ ನೃತ್ಯ ಸಂಯೋಜಕಿ ಸುಮಿ ಬೋರಾ ಎಂಬಾಕೆಯನ್ನು ತಲೆ ಮರೆಸಿಕೊಂಡಿದ್ದು,  ಪೊಲೀಸರು ಆಕೆಗಾಗಿ ಬಲೆ ಬೀಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಪರಾಧಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಸಮಗ್ರ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಜತೆಗೆ ಹೂಡಿಕೆಯನ್ನು ದುಪ್ಪಟ್ಟು ಮಾಡುವ ವಾಗ್ದಾನ ನೀಡುವ ಇಂತಹ ವಂಚಕರಿಂದ ಅಂತರ ಕಾಯ್ದುಕೊಳ್ಳುವಂತೆ ಕರೆ ನೀಡಿದ್ದಾರೆ.

“ಆನ್‌ಲೈನ್‌ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿ ಅದನ್ನು ದುಪ್ಪಟ್ಟು ಮಾಡುವ ಯಾವುದೇ ವ್ಯವಸ್ಥೆ ಇಲ್ಲ ಎನ್ನುವುದನ್ನು ಸಾವರ್ಜನಿಕರು ಅರ್ಥ ಮಾಡಿಕೊಳ್ಳಬೇಕಿದೆ. ಆಮಿಷ ಒಡ್ಡಿ ವಂಚಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ವಂಚಕರಿಂದ ದೂರವಿರಿ. ಪೊಲೀಸರು ಈಗ ಈ ಅಕ್ರಮ ದಲ್ಲಾಳಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ರಾಜ್ಯದಲ್ಲಿ ಬೇರು ಬಿಟ್ಟಿರುವ ಇಡೀ ದಂಧೆಯನ್ನು ಭೇದಿಸಲು ನಾವು ಪ್ರಯತ್ನಿಸುತ್ತೇವೆ” ಎಂದು ಹಿಮಂತ ಬಿಸ್ವಾ ಶರ್ಮಾ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Joy Alukkas: ರೋಲ್ಸ್ ರಾಯ್ಸ್ ಕಾರು ಖರೀದಿಗೆ ಹೋದಾಗ ಅವಮಾನಿತರಾದರೂ ಅದನ್ನು ಖರೀದಿಸಿ ಬಹುಮಾನವಾಗಿ ಕೊಟ್ಟ ಭಾರತೀಯ ಉದ್ಯಮಿ