Friday, 20th September 2024

Wolf Attack: ಮಗನ ಕುತ್ತಿಗೆ ಹಿಡಿದಿದ್ದ ತೋಳದೊಂದಿಗೆ ಸೆಣಸಾಡಿ ಓಡಿಸಿದ ತಾಯಿ!

Wolf Attack

ಮಗು ಅಪಾಯದಲ್ಲಿದ್ದರೆ ತಾಯಿ ತನ್ನ ಪ್ರಾಣವನ್ನೇ ಪಣಕ್ಕಿಡುತ್ತಾಳೆ. ಎಷ್ಟೇ ಸವಾಲು ಎದುರಾದರೂ ಹಿಂಜರಿಯದೇ ಹೋರಾಡುತ್ತಾಳೆ ಎನ್ನುವುದಕ್ಕೆ ಸಾಕ್ಷಿ ಉತ್ತರಪ್ರದೇಶದ (uttarpradesh) ಈ ಮಹಿಳೆ. ಬಹ್ರೈಚ್ ಜಿಲ್ಲೆಯಲ್ಲಿ ತಾಯಿಯೊಬ್ಬಳು ನರಭಕ್ಷಕ ತೋಳದ (Wolf Attack) ವಿರುದ್ಧ ಹೋರಾಡಿ ತನ್ನ ಮಗುವನ್ನು ರಕ್ಷಿಸಿದ ಘಟನೆ ನಡೆದಿದೆ.

ಈ ಘಟನೆಯ ಸುದ್ದಿ ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM  Yogi Adityanath) ಅವರನ್ನೂ ತಲುಪಿದೆ. ಒಂದು ತಿಂಗಳಿನಿಂದ ಹಲವಾರು ಜಿಲ್ಲೆಗಳಲ್ಲಿ ಜನರನ್ನು ಭಯಭೀತಗೊಳಿಸುತ್ತಿರುವ ನರಭಕ್ಷಕ ತೋಳಗಳನ್ನು ಹಿಡಿಯಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್‌  ನಿರ್ದೇಶನ ನೀಡಿದ್ದಾರೆ.

ಸಿನಿಮಾ ಕಥೆಯಂತಿದೆ ಈ ತಾಯಿಯ ಕಥೆ. ಬಹ್ರೈಚ್‌ನ ಹಾರ್ಡಿ ಪ್ರದೇಶದಲ್ಲಿ ಶನಿವಾರ ತಡರಾತ್ರಿ ತೋಳವೊಂದು ದಾಳಿ ನಡೆಸಿದೆ. ಭಾನುವಾರ ಮುಂಜಾನೆ ಮನೆಯ ಅಂಗಳದಲ್ಲಿ ಐದು ವರ್ಷದ ಪರಾಸ್ ತನ್ನ ತಾಯಿ ಗುಡಿಯಾ ಮತ್ತು ಕುಟುಂಬದೊಂದಿಗೆ ಅಂಗಳದಲ್ಲಿ ಮಲಗಿದ್ದ. ಮಗನ ನರಳುವ ಶಬ್ದಕ್ಕೆ ತಾಯಿ ಗುಡಿಯಾ ಎಚ್ಚರಗೊಂಡಳು. ಕತ್ತಲೆಯಲ್ಲಿ ಆಕೆ ದೃಷ್ಟಿ ಹಾಯಿಸಿದಾಗ ಭಯಾನಕ ದೃಶ್ಯ ಆಕೆಯ ಕಣ್ಣ ಮುಂದಿತ್ತು. ತೋಳವು ಆಕೆಯ ಮಗನ ಕುತ್ತಿಗೆಯಲ್ಲಿ ಹಿಡಿದು ಎಳೆದುಕೊಂಡು ಹೋಗುತ್ತಿತ್ತು.

Wolf Attack

ಮುಂದೆ ಹೆಚ್ಚು ಯೋಚನೆಯನ್ನೇ ಮಾಡದೇ ಆಕೆ ತೋಳದತ್ತ ಧಾವಿಸಿದಳು. ಮಗುವನ್ನು ಉಳಿಸುವ ಪ್ರಯತ್ನದಲ್ಲಿ ತೋಳದ ಕುತ್ತಿಗೆಯನ್ನು ತನ್ನ ಕೈಗಳಿಂದ ಬಿಗಿಯಾಗಿ ಹಿಡಿದಳು. ಎಲ್ಲ ಶಕ್ತಿ ಬಳಸಿ ತೋಳದ ಕತ್ತು ಹಿಸುಕಲು ಪ್ರಯತ್ನಿಸಿದಳು. ತೋಳವು ಗಾಬರಿಯಿಂದ ಪರಾಸ್‌ನ ಹಿಡಿತವನ್ನು ಸಡಿಲಿಸಿತು. ತಕ್ಷಣ ಗುಡಿಯಾ ಸಹಾಯಕ್ಕಾಗಿ ಕಿರುಚಿದಳು. ತೋಳವು ಗಾಬರಿಯಿಂದ ಅಂಗಳದ ಗೋಡೆಯನ್ನು ಹಾರಿ ಕತ್ತಲೆಯಲ್ಲಿ ಮರೆಯಾಯಿತು.

ಇನ್ನೂ ಉಸಿರಾಡುತ್ತಿದ್ದ ಮಗುವನ್ನು ಕುಟುಂಬದವರು ಹತ್ತಿರದ ಸಮುದಾಯ ಅರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರು. ನರಭಕ್ಷಕ ತೋಳದ ಕೋರೆಹಲ್ಲುಗಳು ಮಗುವಿನ ಕುತ್ತಿಗೆಗೆ ಆಳವಾಗಿ ಗಾಯ ಮಾಡಿತ್ತು. ಈಗ ಈ ಬಾಲಕ ಅಪಾಯದಿಂದ ಪಾರಾಗಿದ್ದಾನೆ.

ತೋಳದ ದಾಳಿಯಿಂದ ಸಾವನ್ನಪ್ಪಿದ್ದ ಮಗು

ತೋಳದ ದಾಳಿಗೆ ಸಿಲುಕಿ ಎರಡು ವರ್ಷದ ಮಗು ಅಂಜಲಿ ಪ್ರಾಣ ಕಳೆದುಕೊಂಡಿದ್ದಳು. ಮನೆಯಲ್ಲಿ ತಾಯಿಯೊಂದಿಗೆ ಮಲಗಿದ್ದ ಎರಡು ವರ್ಷದ ಮಗುವನ್ನು ತೋಳವೊಂದು ಸೋಮವಾರ ಮುಂಜಾನೆ ಎಳೆದುಕೊಂಡು ಹೋಗಿದೆ. ನಸುಕಿನಲ್ಲಿ ಈ ಘಟನೆ ನಡೆದಿದೆ. ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಧಾವಿಸಿ ತೋಳ ಪತ್ತೆಗೆ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಕಳೆದ 50 ದಿನಗಳಲ್ಲಿ ನರಭಕ್ಷಕ ತೋಳಗಳು ಏಳು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ ಎಂಟು ಜನರನ್ನು ಕೊಂದು ಹಾಕಿದ್ದು, 25 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿವೆ.

ನಾಲ್ಕು ತೋಳ ಸೆರೆ

ಉತ್ತರ ಪ್ರದೇಶದ ಅರಣ್ಯ ಇಲಾಖೆಯು ಆರು ತೋಳಗಳಲ್ಲಿ ನಾಲ್ಕನ್ನು ಸೆರೆ ಹಿಡಿದಿದೆ ಎಂದು ಹೇಳಿಕೊಂಡಿದ್ದರೂ ತೋಳಗಳ ದಾಳಿಯು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಉತ್ತರಪ್ರದೇಶ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತವು 150 ಅರಣ್ಯ ಅಧಿಕಾರಿಗಳು ಸೇರಿದಂತೆ 250 ಕ್ಕೂ ಹೆಚ್ಚು ಸಿಬ್ಬಂದಿಯನ್ನು ತೋಳಗಳನ್ನು ಹಿಡಿಯಲು ನಿಯೋಜಿಸಿದೆ. ತೋಳಗಳನ್ನು ಪತ್ತೆ ಹಚ್ಚಲು ಮೂರು ಸೆಟ್ ಥರ್ಮಲ್ ಡ್ರೋನ್ ಕೆಮರಗಳನ್ನು ಬಳಸಲಾಗುತ್ತಿದೆ. ನರಭಕ್ಷಕ ತೋಳಗಳು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಹ್ಸಿ ತೆಹ್ಸಿಲ್‌ನ ಹರ್ದಿ ಪ್ರದೇಶಗಳಲ್ಲಿ ಆತಂಕ ಸೃಷ್ಟಿಸಿದೆ.

ತುರ್ತು ಕ್ರಮಕ್ಕೆ ಸಿಎಂ ಸೂಚನೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೋಳಗಳ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಆಡಳಿತ, ಪೊಲೀಸ್, ಅರಣ್ಯ ಇಲಾಖೆ, ಸ್ಥಳೀಯ ಪಂಚಾಯತ್ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಲು ಸೂಚಿಸಿರುವ ಅವರು ಜನರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸುವಂತೆ ಹೇಳಿದ್ದಾರೆ.

ಬಹ್ರೈಚ್, ಸೀತಾಪುರ್, ಲಖಿಂಪುರ, ಪಿಲಿಭಿತ್ ಮತ್ತು ಬಿಜ್ನೋರ್ ಸೇರಿದಂತೆ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಯಿಂದ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿರುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿ ಅರಣ್ಯ ಸಚಿವರಿಗೆ ಸೂಚಿಸಿದ್ದಾರೆ. ಈ ಪ್ರದೇಶಗಳಲ್ಲಿ ಹಿರಿಯ ಅಧಿಕಾರಿಗಳು ಬೀಡುಬಿಟ್ಟು ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಬೇಕು. ವಿದ್ಯುತ್ ಸಮಸ್ಯೆ ಇರುವ ಪ್ರದೇಶಗಳಲ್ಲಿ ಪೆಟ್ರೋಮ್ಯಾಕ್ಸ್ ದೀಪಗಳನ್ನು ಅಳವಡಿಸಲು ಅರಣ್ಯ ಇಲಾಖೆಗೆ ಸಿಎಂ ಯೋಗಿ ಆದೇಶಿಸಿದ್ದಾರೆ.