ನವದೆಹಲಿ: ನಡುರಸ್ತೆಯಲ್ಲಿಯೇ ಮಹಿಳೆಯೊಬ್ಬರು ಕ್ಯಾಬ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್ ಆಗಿದೆ.
ಘಟನೆಗೆ ಸಂಬಂಧಿಸಿದಂತೆ ಕ್ಯಾಬ್ ಚಾಲಕನಿಂದ ದೂರು ಪಡೆದು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಯು ಪಶ್ಚಿಮ ಪಟೇಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಾಲಕನ ಮೇಲೆ ಹಲ್ಲೆ ನಡೆಸಿರುವ ಮಹಿಳೆಯನ್ನು ಪತ್ತೆ ಹಚ್ಚಲು ಖಾಕಿಪಡೆ ಈಗ ಪ್ರಯತ್ನಿಸುತ್ತಿದೆ. ಸಾಮಾಜಿಕ ಮಾಧ್ಯಮ ದಲ್ಲಿ ವೈರಲ್ ಆಗಿರುವ 2 ನಿಮಿಷಗಳ ವಿಡಿಯೋದಲ್ಲಿ, ನೀಲಿ ಟಿ-ಶರ್ಟ್ ಮತ್ತು ಫೇಸ್ ಮಾಸ್ಕ್ ಧರಿಸಿರುವ ಮಹಿಳೆಯೊಬ್ಬರು ಕ್ಯಾಬ್ ಚಾಲಕನಿಗೆ ತೀವ್ರವಾಗಿ ಥಳಿಸಿದ್ದಾರೆ.
ಕ್ಯಾಬ್ ಚಾಲಕನ ಮೇಲೆ ಮಹಿಳೆ ಹಲ್ಲೆ ನಡೆಸುತ್ತಿದ್ದರೂ ಪಕ್ಕದಲ್ಲಿಯೇ ನಿಂತಿದ್ದ ಜನರು ಮೌನಪ್ರೇಕ್ಷಕರಂತೆ ನೋಡುತ್ತಿದ್ದರು. ಕೆಲವರು ಹಲ್ಲೆ ನಡೆಸದಂತೆ ಸಲಹೆ ನೀಡಿದರೂ ಆಕೆ ಕೇಳಿಸಿಕೊಂಡಿಲ್ಲ. ಅನೇಕರು ತಮ್ಮ ಮೊಬೈಲ್ ನಲ್ಲಿ ಘಟನೆಯನ್ನು ಸೆರೆ ಹಿಡಿದಿ ದ್ದಾರೆ.
ಸ್ಥಳದಲ್ಲಿದ್ದ ಜನರು ಮಹಿಳೆಗೆ ಬುದ್ದಿವಾದ ಹೇಳಿದ್ದಾರೆ. ಸೊಪ್ಪು ಹಾಕದ ಮಹಿಳೆ ಅವರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ ದ್ದಾಳೆ. ಕ್ಯಾಬ್ ಚಾಲಕನಿಗೂ ಬೈದು ಹಲ್ಲೆ ಮಾಡಿದ್ದಾಳೆ. ಕ್ಯಾಬ್ ಚಾಲಕನ ಶರ್ಟ್ ಹಿಡಿದು ಕಪಾಳಮೋಕ್ಷ ಮಾಡುತ್ತಿರುವುದನ್ನು ಕಾಣಬಹುದು.
ವಿಡಿಯೋ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.