Thursday, 12th December 2024

ಮಹಿಳಾ ಮಸೂದೆಗೆ ’ನಾರಿ ಶಕ್ತಿ ವಂದನಾ ಕಾಯ್ದೆ’ ನಾಮಕರಣ

ವದೆಹಲಿ: ನೂತನ ಸಂಸತ್ ಭವನದಲ್ಲಿ ಸರ್ಕಾರವು ಮೊದಲ ಮಸೂದೆಯನ್ನ ಲೋಕಸಭೆಯ ಕಲಾಪಗಳಲ್ಲಿ ಪರಿಚಯಿಸಿತು. ಮೊದಲ ಮಸೂದೆ ಮಹಿಳಾ ಮೀಸಲಾತಿಗೆ ಸಂಬಂಧಿಸಿದ್ದು, ಇದಕ್ಕೆ ‘ನಾರಿ ಶಕ್ತಿ ವಂದನಾ ಕಾಯ್ದೆ’ ಎಂದು ಹೆಸರಿಡಲಾಗಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಈ ಮಸೂದೆಯನ್ನ ಮಂಡಿಸಿದರು. ಈ ಮಸೂದೆ ಯಡಿ 181 ಲೋಕಸಭಾ ಸ್ಥಾನಗಳನ್ನ ಮಹಿಳೆಯರಿಗೆ ಮೀಸಲಿಡಲಾಗುವುದು. ವಿಧಾನಸಭೆಯ ಶೇ.33ರಷ್ಟು ಸ್ಥಾನಗಳನ್ನ ಮಹಿಳೆಯರಿಗೆ ಮೀಸಲಿಡಲಾಗಿದೆ. ದೆಹಲಿ ವಿಧಾನಸಭೆಯಲ್ಲಿ ಶೇಕಡಾ 33ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ 84 ಸ್ಥಾನಗಳಲ್ಲಿ ಶೇ.33ರಷ್ಟು ಮಹಿಳೆಯರಿಗೆ ಮತ್ತು ಶೇ.33ರಷ್ಟು ಸ್ಥಾನಗಳನ್ನ ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾಗಿದೆ.

ಮಹಿಳಾ ಮೀಸಲಾತಿ ಮಸೂದೆ ಕಳೆದ 27 ವರ್ಷಗಳಿಂದ ಬಾಕಿ ಉಳಿದಿತ್ತು. ಇದನ್ನ ಮೊದಲು 1996ರಲ್ಲಿ ದೇವೇಗೌಡ ಸರ್ಕಾರ ಪರಿಚಯಿಸಿತು. ಬಳಿಕ 1998, 1999 ಮತ್ತು 2002 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನ ಸಹ ತರಲಾಯಿತು. 1998 ರಲ್ಲಿ, ಲಾಲು ಯಾದವ್ ಅವರ ಪಕ್ಷವು ಲಾಲ್ ಕೃಷ್ಣ ಅಡ್ವಾಣಿ ಅವರ ಕೈಯಿಂದ ಮಸೂದೆಯ ಪ್ರತಿಯನ್ನ ಕಸಿದು ಕೊಂಡು ಅದನ್ನ ಹರಿದು ಹಾಕಿತು ಮತ್ತು ಮಸೂದೆ ಪರಿಚಯಿಸುವುದನ್ನ ವಿರೋಧಿಸಿತು.

ನಂತರ, ಡಾ.ಮನಮೋಹನ್ ಸಿಂಗ್ ಅವರ ಸರ್ಕಾರವು ಇದನ್ನು 2008ರಲ್ಲಿ ರಾಜ್ಯಸಭೆಯಲ್ಲಿ ಪರಿಚಯಿಸಿತು. ಆ ಸಮಯದಲ್ಲಿ ಮಸೂದೆಯನ್ನ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಯಿತು, ನಂತರ ಈ ಮಸೂದೆಯನ್ನ 2010ರಲ್ಲಿ ರಾಜ್ಯಸಭೆ ಅಂಗೀಕರಿಸಿತು.