Saturday, 14th December 2024

ನೀವೇ ಜಾನುವಾರುಗಳ ಮಾಲೀಕರು, ಭಾರತ ಸರ್ಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ: ಮೋದಿ

ಕಚ್‌: ರೈತ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ವರ್ಷಗಳಿಂದ ಸಲ್ಲಿಸುತ್ತಿದ್ದ ಬೇಡಿಕೆಗಳೇ ಕೃಷಿ ಕಾಯ್ದೆ ತಿದ್ದುಪಡಿಗಳು ಒಳಗೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ.

ಮಂಗಳವಾರ ಕಚ್‌ನ ಅಭಿವೃದ್ಧಿ ಯೋಜನೆಗಳ ಶಂಕು ಸ್ಥಾಪನೆ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮಾತನಾಡಿ, ‘ಭಾರತ ಸರ್ಕಾರವು ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದಿದ್ದಾರೆ.

‘ವಿರೋಧ ಪಕ್ಷಗಳಲ್ಲಿ ಕುಳಿತಿರುವವರು ಹಾಗೂ ಇಂದು ರೈತರ ಹಾದಿ ತಪ್ಪಿಸುತ್ತಿರುವವರು, ಅವರ ಆಡಳಿತಾವಧಿಯಲ್ಲಿ ಈ ಕೃಷಿ ಕಾಯ್ದೆ ತಿದ್ದುಪಡಿಗಳ ಕಡೆಗೆ ಒಲವು ತೋರಿದ್ದರು. ಈಗ ದೇಶವು ಐತಿಹಾಸಿಕ ಹೆಜ್ಜೆ ಇಟ್ಟಿರುವ ಸಮಯದಲ್ಲಿ ಅದೇ ಜನರು ರೈತರ ಹಾದಿ ತಪ್ಪಿಸುತ್ತಿದ್ದಾರೆ’. ಯೋಜಿತ ಪಿತೂರಿಯ ಭಾಗವಾಗಿ ಪ್ರತಿಭಟನಾ ನಿರತ ರೈತರನ್ನು ದಾರಿ ತಪ್ಪಿಸಲಾಗಿದೆ. ಹೊಸ ಕೃಷಿ ಕಾಯ್ದೆ ತಿದ್ದುಪಡಿಗಳಿಂದ ರೈತರ ಭೂಮಿಯನ್ನು ಮತ್ತೊಬ್ಬರು ಆಕ್ರಮಿಸಿಕೊಳ್ಳುತ್ತಾರೆ ಎಂದು ಬೆದರಿಕೆ ಉಂಟು ಮಾಡಲಾಗಿದೆ.

ಇದೇ ವೇಳೆ, ಹಾಲಿನ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಘಟಕ, ಹೈಬ್ರಿಡ್ ನವೀಕರಿಸಬಹುದಾದ ಇಂಧನ ಪಾರ್ಕ್ ನಿರ್ಮಾಣಕ್ಕೆ ಶುಂಕುಸ್ಥಾಪನೆ ನೇರವೇರಿಸಿದರು. ಡೈರಿಯೊಂದು ನಿಮ್ಮಿಂದ ಹಾಲು ಸಂಗ್ರಹಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿರುತ್ತದೆ ಎಂದಿಟ್ಟುಕೊಳ್ಳಿ, ಅವರು ನಿಮ್ಮ ಜಾನುವಾರುಗಳನ್ನೂ ತೆಗೆದುಕೊಂಡು ಹೋಗುವರೇ?’ ಎಂದು ಮೋದಿ ಪ್ರಶ್ನಿಸಿದ್ದಾರೆ. ನೀವೇ ಜಾನುವಾರಗಳ ಮಾಲೀಕರು. ಹಾಲನ್ನು ಆ ಸಂಸ್ಥೆಗಳಿಗೆ ಮಾರುತ್ತಿರುವವರು ರೈತರು ಎಂದು ಮೋದಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಹದಿನೈದು ದಿನಗಳಿಂದ ಪಂಜಾಬ್, ಹರಿಯಾಣ ಮತ್ತು ಇತರೆಡೆಗಳಿಂದ ಸಾವಿರಾರು ರೈತರು ಸಿಂಗು ಗಡಿ ಮತ್ತು ಟಿಕ್ರಿ ಗಡಿ ಸೇರಿದಂತೆ ದೆಹಲಿಯ ವಿವಿಧ ಗಡಿ ಕೇಂದ್ರಗಳ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.