Tuesday, 10th September 2024

ನೀವು ಬಯಸಿದರೆ ನನ್ನನ್ನು ಗಲ್ಲಿಗೇರಿಸಿ: ಆರೋಪಿ ಸಂಜೋಯ್ ರಾಯ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿ ಸಂಜೋಯ್ ರಾಯ್ ಆಸ್ಪತ್ರೆಯ ಉದ್ಯೋಗಿ ಅಲ್ಲ ಎಂಬ ಸಂಗತಿ ತನಿಖೆ ವೇಳೆ ಇದೀಗ ಬೆಳಕಿಗೆ ಬಂದಿದೆ.

ಹಂತಕ ರಾಯ್ ಕೋಲ್ಕತ್ತಾ ಪೊಲೀಸರೊಂದಿಗೆ ನಾಗರಿಕ ಸ್ವಯಂಸೇವಕರಾಗಿ ಕೆಲಸ ಮಾಡಿದ್ದ. ನಾಗರಿಕ ಸ್ವಯಂಸೇವಕರು ಟ್ರಾಫಿಕ್ ನಿರ್ವಹಣೆ ಮತ್ತು ವಿಪತ್ತು ಪ್ರತಿಕ್ರಿಯೆ ಸೇರಿದಂತೆ ವಿವಿಧ ರೀತಿಯ ಕೆಲಸಗಳಲ್ಲಿ ಪೊಲೀಸರಿಗೆ ಸಹಾಯ ಮಾಡಲು ನೇಮಕಗೊಂಡ ಗುತ್ತಿಗೆ ಸಿಬ್ಬಂದಿಯಾಗಿದ್ದ. 2019 ರಲ್ಲಿ ಕೋಲ್ಕತ್ತಾ ಪೊಲೀಸರ ವಿಪತ್ತು ನಿರ್ವಹಣಾ ಗುಂಪಿಗೆ ಸ್ವಯಂಸೇವಕನಾಗಿ ಸೇವೆ ಸೇರಿಕೊಂಡಿದ್ದ ಎನ್ನಲಾಗಿದೆ.

ನಂತರ ಪೊಲೀಸ್ ಕಲ್ಯಾಣ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ. ಬಳಿಕ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪೊಲೀಸ್ ಹೊರಠಾಣೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಇನ್ನು ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ರೋಗಿಗಳಿಂದ ಹೆಚ್ಚು ಹಣ ಪಡೆದು ಅದನ್ನು ನೀಡುವುದು ಹೀಗೆ ಹಲವು ದಂಧೆ ಗಳಲ್ಲಿ ಆತ ಭಾಗಿಯಾಗಿದ್ದ ಎನ್ನಲಾಗಿದೆ.

ಪೊಲೀಸರು ಅವರನ್ನು ಪ್ರಶ್ನಿಸಲು ಪ್ರಾರಂಭಿಸಿದ ಕೂಡಲೇ ರಾಯ್ ಅಪರಾಧ ಒಪ್ಪಿಕೊಂಡಿದ್ದಾರೆ. ಆತನಿಗೆ ಯಾವುದೇ ಪಶ್ಚಾತ್ತಾಪ ಇಲ್ಲ. ಅಲ್ಲದೇ ನೀವು ಬಯಸಿದರೆ ನನ್ನನ್ನು ಗಲ್ಲಿಗೇರಿಸಿ” ಎಂದು ಅಸಡ್ಡೆಯಿಂದ ಉತ್ತರ ಕೊಟ್ಟಿದ್ದಾನೆ.

ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು.

Leave a Reply

Your email address will not be published. Required fields are marked *