Friday, 7th May 2021

ಅಕ್ರಮ ಸಾಗುವಳಿ ಚೀಟಿ: ತನಿಖೆಗೆ ನ್ಯಾಯಾಲಯ ಆದೇಶ

ತುಮಕೂರು: ತನ್ನ ಶಾಸಕ ಸ್ಥಾನದ ಅಧಿಕಾರ ದುರುಪಯೋಗ ಪಡಿಸಿಕೊಂಡು ಸ್ವಜನ ಪಕ್ಷಪಾತದಿಂದ ತನ್ನ ಹಿಂಬಾಲಕರಿಗೆ ಅಕ್ರಮವಾಗಿ ಸಾಗುವಳಿ ಚೀಟಿ ನೀಡಿ ಸರಕಾರದ ಬೊಕ್ಕಸದಿಂದ ಹಣ ಲೂಟಿ ಮಾಡಲು ಸಂಚು ರೂಪಿಸಿ ಅಕ್ರಮ ಎಸಗಿದ ಆರೋಪದಡಿ ಕಾಸಗಿ ದೂರಿನನ್ವಯ ಮಾಜಿ ಶಾಸಕ ಬಿ.ಸುರೇಶ್‌ಗೌಡ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಲು ಜಿಲ್ಲಾ ಅಧಿಕ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ.

ಬೆಳಗುಂಬ ವೆಂಕಟೇಶ್ ಅವರು ಒಂದನೇ ಅಧಿಕ ಸಿವಿಲ್ ನ್ಯಾಯಾಲಯದಲ್ಲಿ ಸಿಆರ್‌ಪಿಸಿ 200 ರಡಿ ಖಾಸಗಿ ದೂರು ದಾಖಲಿಸಿ ಮಾಜಿ ಶಾಸಕ ಬಿ.ಸುರೇಶ್‌ಗೌಡ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರಕಾರದ ಭೂಮಿಯನ್ನು ಸರ್ಕಾರದ ನಿಯಮಗಳನ್ನು ಪಾಲಿಸದೆ ಸ್ವಜನ ಪಕ್ಷಪಾತದಿಂದ ಜಮೀನು ಉಳ್ಳವರಿಗೆ ಸರ್ಕಾರ ಕೆಐಡಿಬಿಯಿಂದ ಪರಿಹಾರದ ಹಣ ಪಡೆಯುವ ಸಲುವಾಗಿ ಭೂ ಮಂಜೂರು ಮಾಡಿ ಸರಕಾರದ ಬೊಕ್ಕಸದ ಹಣ ಪಡೆಯಲು ಸಂಚು ರೂಪಿಸಿ ದ್ದರು ಎಂದು ಆರೋಪಿಸಿ ಖಾಸಗಿ ದೂರನ್ನು 1ನೇ ಅಧಿಕ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಿದ್ದರು.

ವಾದ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ದಿನಾಂಕ 24-03-2021 ರಂದು ಆರೋಪಿರ ಮೇಲೆ ಐಪಿಸಿ 120(ಬಿ), 406, 409, 420, 468 ಮತ್ತು 471ರಡಿ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಸಂಬAಧಿಸಿ ತನಿಖಾಧಿಕಾರಿಗಳಿಗೆ ನಿರ್ದೇಶಿಸಿದೆ.

ಪ್ರಕರಣದ ಸಾರಾಂಶ: ಮಾಜಿ ಶಾಸಕ ಬಿ.ಸುರೇಶ್‌ಗೌಡ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಅವರೇ ಬಗರ್‌ಹುಕ್ಕುಂ ಸಮಿತಿಯ ಅಧ್ಯಕ್ಷರಾಗಿದ್ದು, ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿ ಸೋರೆಕುಂಟೆ ಗ್ರಾಮದ ಸರ್ಕಾರಿ ಜಮೀನು ಸರ್ವೇ ನಂಬರ್ 41 ರಲ್ಲಿ ಸುಮಾರು 42 ಜನರಿಗೆ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನವಾಗಿದ್ದ ಜಮೀನನ್ನು ಈಗಾಗಲೇ ಜಮೀನು ಹೊಂದಿರುವ ಹಾಗೂ ಸರ್ಕಾರಿ ಕೆಲಸದಲ್ಲಿ ಇರುವ ಭೂ ಹಿಡುವಳಿದಾರರಿಗೆ ನಿಯಮಗಳನ್ನು ಉಲ್ಲಂಘಿಸಿ ಅಧಿಕಾರ ದುರು ಪಯೋಗಪಡಿಸಿಕೊಂಡು ಜಮೀನು ಮಂಜೂರು ಮಾಡಿದ್ದರು, ಮಂಜೂರು ಮಾಡುವ ಸಂದರ್ಭದಲ್ಲಿ ನಿಯಮಾನುಸಾರ ಸಭೆ ಕರೆಯದೆ, ಸಭೆಯಲ್ಲಿ ನಿಯಮದಂತೆ ನಿರ್ಣಯ ಮಾಡದೆ ಮಂಜೂರು ಅರ್ಜಿ ನೀಡಲು ಶಾಸಕರು ಒಳಗೊಂಡಂತೆ ಸಮಿತಿಯ ಸದಸ್ಯರು ಸಹಿ ಮಾಡಿ ಕೇವಲ ಮಂಜೂರುದಾರರು ಕೆಐಎಡಿಬಿಯಿಂದ ಪರಿಹಾರದ ಬಾಬ್ತು ಹಣ ಪಡೆಯಲು ಮಾತ್ರವೆಂದು ಮಂಜೂರು ಮಾಡಿದ್ದರು, ಅಲ್ಲದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಸಾಗುವಳಿ ಚೀಟಿ ನೀಡಿದ್ದರು.

ನಂತರ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ 5 ಜನರ ಸಮಿತಿ ವರದಿಗೆ ಆರೋಪಿಸಿ ವರದಿಯಲ್ಲಿ ಅಕ್ರಮವೆಸಗಿರುವುದಾಗಿ ಸರ್ಕಾರಕ್ಕೆ ವರದಿ ಕಳಿಸಲಾಗಿತ್ತು, ನಂತರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸರ್ಕಾರವೇ ಅಕ್ರಮ ಆಗಿರುವುದನ್ನು ಒಪ್ಪಿಕೊಂಡಿತ್ತು, ಆದರೂ ಮಾಜಿ ಶಾಸಕರ ಮೇಲೆ ಯಾವುದೇ ಪ್ರಕರಣ ದಾಖಲಿಸದ ಕಾರಣ ಹಾಗೂ ಸರಕಾರದ ಭೂ ಸ್ವಾಧೀನದ ಹಣ ಮತ್ತು ಜಮೀನನ್ನು ಸರ್ಕಾರಕ್ಕೆ ಉಳಿಸುವ ಸಲುವಾಗಿ ಖಾಸಗಿ ದೂರು ದಾಖಲಿಸಲಾಗಿತ್ತು.

ವಾದ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ ಮಾಜಿ ಶಾಸಕ ಹಾಗೂ ಬಗರ್ ಹುಕ್ಕುಂ ಕಮಿಟಿ ಅಧ್ಯಕ್ಷರಾಗಿದ್ದ ಬಿ.ಸುರೇಶ್‌ಗೌಡ ಮತ್ತು ಸಮಿತಿ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದೆ.

Leave a Reply

Your email address will not be published. Required fields are marked *