Monday, 16th May 2022

ಕರೋನಾ 3ನೇ ಅಲೆ ಎದುರಿಸಲು ತಾಲ್ಲೂಕು ಆಡಳಿತದಿಂದ ಸಂಪೂರ್ಣ ಸಿದ್ದತೆ

ಮಾನ್ವಿ: ಕರೋನಾ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ತಾಲ್ಲೂಕಿನ ಆಸ್ಪತ್ರೆಗಳಲ್ಲಿ ಸಂಪೂರ್ಣವಾಗಿ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು ತಾಲ್ಲೂಕಿನ ವಿವಿಧ ಆಸ್ಪತ್ರೆಗಳಿಗೆ ಅಂಬ್ಯುಲೆನ್ಸ ವ್ಯವಸ್ಥೆ,ಶುದ್ದಕುಡಿಯುವ ನೀರಿನ ವ್ಯವಸ್ಥೆ, ಜನರೇಟರ್ ವ್ಯವಸ್ಥೆ, ಆಮ್ಲಜನಕಯುಕ್ತ ಹಾಸಿಗೆಗಳ ವ್ಯವಸ್ಥೆ ,ಪ್ರತ್ಯೇಕವಾದ ಕೋವಿಡ್ ಕೇರೆ ಸೆಂಟರ್ ಗಳನ್ನು ಪ್ರಾರಂಭಿಸಲಾಗಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.

ಪಟ್ಟಣದ ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಕೋವಿಡ್-19 ಬೂಸ್ಟರ್ ಡೋಸ್ ವಿತರಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಓಮಿಕ್ರಾನ್ ಕೋವಿಡ್-19 ವೈರಸ್‌ನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಕೋವಿಡ್ ಸೋಂಕು ನಿವಾರಣೆಯಲ್ಲಿ ಕರೋನ ವಾರಿರ‍್ಸ್ಗಳಾಗಿ ತಮ್ಮ ಜೀವದ ಹಂಗನ್ನು ತೊರೆದು ಹೋರಾಡುತ್ತಿರುವ ವೈದ್ಯರು,ಸರಕಾರಿ ಅಧಿಕಾರಿಗಳು,ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸುರಕ್ಷತೆ ಗಾಗಿ ಹಾಗೂ ಹಿರಿಯ ನಾಗರಿಕರಿಗೆ, ಹಾಗೂ ಗಂಭೀರವಾದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ 3ನೇ ಡೋಸ್ ಹಾಗೂ 15ರಿಂದ 18 ವರ್ಷದ 22ಸಾವಿರ ಮಕ್ಕಳಿಗೆ ಉಚಿತವಾಗಿ ಸರಕಾರದಿಂದ ಲಸಿಕೆಯನ್ನು ಆರೋಗ್ಯ ಇಲಾಖೆಯ ಮೂಲಕ ನೀಡಲಾಗುತ್ತಿದೆ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯಸ್ವಾಮಿ ಮಾತನಾಡಿ ವೈರಸ್ ನಿಂದ ಹರಡುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ನಿರ್ದಿಷ್ಟವಾದ ಔಷದಗಳು ಲಭ್ಯವಿಲ್ಲದೆ ಇರುವುದರಿಂದ ಲಸಿಕೆಯೊಂದೆ ಪರಿಹಾರವಾಗಿದ್ದು ಲಸಿಕೆಯ ಪ್ರಭಾವ ಕೇವಲ 10 ತಿಂಗಳು ಮಾತ್ರ ಇರುವುದರಿಂದ 3ನೇ ಡೋಸ್ ಪಡೆಯುವುದು ಅವಶ್ಯವಾಗಿದೆ ತಾಲ್ಲೂಕಿನಲ್ಲಿ ಮೊದಲ ಹಂತದಲ್ಲಿ 2021ರ ಜ 16ರಿಂದ ಲಸಿಕೆ ಹಾಕುವುದಕ್ಕೆ ಚಾಲನೆ ನೀಡಲಾಗಿದ್ದು ಶೇ97ರಷ್ಟು ಲಸಿಕೆ ಹಾಕುವ ಗುರಿಯನ್ನು ಸಾಧಿಸಲಾಗಿದೆ ಎರಡನೇ ಹಂತದಲ್ಲಿ ಶೇ 75ರಷ್ಟು ಜನರಿಗೆ ಲಸಿಕೆ ಹಾಕಲಾಗಿದ್ದು 3ನೇ ಹಂತದಲ್ಲಿ ಆದ್ಯತೆಯ ಮೇಲೆ 60ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ಹಾಕಲಾಗುವುದು ಎಂದು ತಿಳಿಸಿದರು.

ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಅಂಬಿಕಾ ಮಧುಸೂಧನ ,ಡಾ.ಸುಧಾಕರ್, ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಹಾಗೂ ಹಿರಿಯ ನಾಗರಿಕರಿಗೆ, ಹಾಗೂ ಗಂಭೀರವಾದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ 3ನೇ ಡೋಸ್ ಲಸಿಕೆಯನ್ನು ಹಾಕಲಾಯಿತು.

ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ತಾ.ಅಧ್ಯಕ್ಷ ಡಾ.ಶರಣಪ್ಪ ಬಲ್ಲಟ್ಟಗಿ,ತಹಸೀಲ್ದಾರ್ ಪರಶುರಾಮ,ಗ್ರೆಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್,ಸಿ.ಡಿ.ಪಿ.ಒ.ಸುಭದ್ರ ದೇವಿ,ಪುರಸಭೆ ಸದಸ್ಯರಾದ ಶರಣಪ್ಪ ಮೇದ,ಬಾಷಸಾಬ್,ಖಲೀಲ್ ಖುರೇಷಿ,ಬಸಮ್ಮ, ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.