Friday, 19th August 2022

ಕೋವಿಡ್‌ಗೆ ಬಲಿಯಾಯಿತೆ ವೈವಾಹಿಕ ಜೀವನ ?

ಸವಿತಾ ಸಿ.ಜಿ.

ಕಳೆದ ವರ್ಷ ಮನುಕುಲದ ಮೇಲೆ ಎರಗಿದ ಕೋವಿಡ್-೧೯ ವೈರಸ್ ಮಾಡಿರುವ ಸಾಮಾಜಿಕ ಬದಲಾವಣೆಗಳು, ಸ್ಥಿತ್ಯಂತರಗಳು ಬಹು ಆಯಾಮದ್ದು. ಒಂದೂವರೆ ವರ್ಷ ಕಳೆದರೂ, ಹೊಸ ಹೊಸ ಮುಖವಾಡ ಧರಿಸಿ, ಜಗತ್ತಿನ ಮೂಲೆ ಮೂಲೆಗಳಿಗೆ ಪಸರಿಸುತ್ತಲೇ ಇರುವ ಈ ವೈರಸ್, ಮನುಷ್ಯನ ನಾಗರಿಕ ವ್ಯವಸ್ಥೆಗಳ ಅಡಿಪಾಯದ ಕಲ್ಲುಗಳನ್ನೇ ಸಡಲಿಸುತ್ತಿರುವುದು ಒಂದು ಕಟು ಸತ್ಯ. ಈ ವೈರಸ್ ಮಾಡಿರುವ ಹಾನಿಯ ಇನ್ನೊಂದು ಆಯಾಮವೆಂದರೆ ಕೌಟುಂಬಿಕ ಸಂಘರ್ಷ, ಸಂಸಾರದಲ್ಲಿ ಮನಸ್ತಾಪ. ಕೋವಿಡ್-೧೯ ತಂದಿಟ್ಟ ಸೂಕ್ಷ್ಮ ಬಿಕ್ಕಟ್ಟನ್ನು ಚರ್ಚಿಸುವ ಲೇಖನವಿದು.

ಮದುವೆ ಎನ್ನುವುದು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಒಂದು ವ್ಯವಸ್ಥೆ . ಇದು ಸಂಸ್ಕೃತಿ, ಧರ್ಮ ಮತ್ತು ಭೌಗೋಳಿಕ ವ್ಯತ್ಯಾಸಗಳ ವೈವಿಧ್ಯತೆಯ ನಡುವೆಯೂ ಸಮಾಜಕ್ಕೆ ಬೇಕಾದ ಒಂದು ಬಹುಮುಖ್ಯ ಕಟ್ಟಳೆ. ಮಾನವಕುಲದ ಮೇಲೆ ಪರಿಣಾಮ ಬೀರುವ ಯಾವುದೇ ಬಿಕ್ಕಟ್ಟು , ಜನರ ವೈವಾಹಿಕ ಜೀವನವನ್ನೂ ಸಹ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾದಿಸುತ್ತದೆ.

ಕರೋನ ವೈರಸ್ ಸಾಂಕ್ರಾಮಿಕವೂ ಇದಕ್ಕೆ ಹೊರತಲ್ಲ. ಕೋವಿಡ್ -೧೯ ಸಾಂಕ್ರಾಮಿಕವು ಮನೆಯಿಂದಲೇ ಕೆಲಸ ಮಾಡುವ ಹೊಸ ವಾತಾವರಣ ಸೃಷ್ಟಿಸಿದೆ. ಇತ್ತೀಚಿಗೆ ಆರಂಭವಾದ ವರ್ಕ್ -ಮ್ ಹೋಂ ಸಂಸ್ಕೃತಿಯು ಹಲವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದ್ದರೆ, ಮತ್ತೆ ಕೆಲವರಿಗೆ  ಕುಟುಂಬ ದಲ್ಲಿ ಒಗ್ಗಟ್ಟನ್ನು ಬೆಳಸಿದೆ. ಆದರೆ ಹಲವು ಕುಟುಂಬಗಳಲ್ಲಿ ವೈವಾಹಿಕ ಭಿನ್ನಾಭಿಪ್ರಾಯಗಳನ್ನೂ ಸಹ ಹುಟ್ಟು ಹಾಕಿದೆ ಎಂಬ ವಿಚಾರ ಅಚ್ಚರಿ ಯನ್ನೂ, ಬೇಸರವನ್ನೂ ಹುಟ್ಟಿಸುತ್ತದೆ.

ಭಾರತದ ಬೃಹತ್ ನಗರಗಳಾದ ಡೆಲ್ಲಿ, ಬೆಂಗಳೂರು, ವಿಶಾಖ ಪಟ್ಟಣಗಳ ವಕೀಲರ ಪ್ರಕಾರ ವಿವಾಹ ವಿಚ್ಛೇದನ ಕೋರಿ ಸಲ್ಲಿಸುವ ಅರ್ಜಿಗಳ ಸಂಖ್ಯೆ, ಕೋವಿಡ್ ಸಾಂಕ್ರಾಮಿಕ ವರ್ಷದಲ್ಲಿ, ಮಾಮೂಲಿನ ಸ್ಥಿತಿಗಿಂತ ಶೇಖಡಾ ೩೦ ರಿಂದ ೪೦ರವರೆಗೂ ಹೆಚ್ಚಿದೆ. ಭಾರತವೊಂದೇ ಅಲ್ಲ ಇಂಗ್ಲೆಂಡ್, ಅಮೇರಿಕಾ, ಮಲೇಷ್ಯಾ ಇತ್ಯಾದಿ ದೇಶ ಗಳಲ್ಲೂ ಕಳೆದ ಒಂದು ವರ್ಷದಿಂದ ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಅಂಕಿ ಅಂಶಗಳ ಪ್ರಕಾರ ತಿಳಿದು ಬರುತ್ತಿದೆ.

ಬ್ಲೂಮ್ ಬರ್ಗ್ ಎಂಬ ಮಾಹಿತಿ ತಾಣದ ವರದಿಯ ಪ್ರಕಾರ, ಚೀನಾ ದೇಶದಲ್ಲಿ ಮಾರ್ಚ್ ೨೦೨೦ ರಲ್ಲಿ ಮೊದಲ ಕೋವಿಡ್ ಲಾಕ್ಡೌನ್ ತೆರೆಯುತ್ತಿದಂತೆ ವಿಚ್ಛೇದನದ ಕೋರಿಕೆಗಳು ಎಷ್ಟು ಹೆಚ್ಚಾದವೆಂದರೆ ಸರಕಾರದ ಕಚೇರಿಗಳಲ್ಲಿ ನೌಕರರಿಗೆ ನೀರು ಕುಡಿಯಲೂ ಸಮಯವಿಲ್ಲದಷ್ಟು ಕೆಲಸ ಹೆಚ್ಚಿತು.
ಕಾರಣಗಳೇನಿರಬಹುದು?

ನಿರಂತರ ಸಾಮೀಪ್ಯ : ದಾಂಪತ್ಯದಲ್ಲಿ ಗಂಡು ಹೆಣ್ಣಿನ ನಡುವಿನ ಹೊಂದಾಣಿಕೆ ಕತ್ತಿಯ ಮೊನಚಿನ ಮೇಲೆ ಇದ್ದಂತೆ. ಹಲವು ಭಿನ್ನಾಭಿಪ್ರಾಯ

ಗಳಿದ್ದರೂ, ದಿನದ ಬಹುಪಾಲು ಕೆಲಸದ ನೆವದಲ್ಲಿ ದೂರ ದೂರ ಇದ್ದು, ಪರಸ್ಪರ ಭೇಟಿಯಾಗದೆ, ತಮ್ಮ ವೈಯುಕ್ತಿಕ ಬೆಳವಣಿಗೆಗೆ ಸ್ವಲ್ಪ ಜಾಗ ಕಂಡಿಕೊಂಡು, ವೈಯುಕ್ತಿಕ ಪರಿಧಿಯನ್ನು ಕಾಪಾಡಿ ಕೊಳ್ಳುತ್ತಾ, ಈ ವಿಷಯಗಳ ಬಗ್ಗೆ ನಿರ್ಲಕ್ಷ್ಯ ತಳೆದಿರುತ್ತಾರೆ. ಆದರೆ ಈ ಸಾಂಕ್ರಾಮಿಕದ ದಿನಗಳಲ್ಲಿ ಪ್ರತಿಕ್ಷಣವೂ ಜೊತೆಯ ಇರುವ ಕಾರಣ, ಸ್ವಂತ ಸಮಯಕ್ಕೆ ಬೆಲೆಯಿಲ್ಲದಂತಾಗಿ, ಮುಸುಕಿನಲ್ಲಿ ಮರೆಯಾಗಿದ್ದ ಭಿನ್ನಾಭಿಪ್ರಾಯಗಳ ಕಿಡಿ ಸ್ವಲ್ಪ ಸ್ವಲ್ಪವೇ ಪ್ರಜ್ವಲಿಸಲಾರಂಭಿಸಿ ವಿಚ್ಛೇದನದವರೆಗೂ ತಲುಪುತ್ತದೆ.

ಸಣ್ಣ ಪುಟ್ಟ ಕಲಹಗಳೂ ಕೂಡ ಬೃಹದಾಕಾರ ತಾಳಿ ಇಬ್ಬರು ವ್ಯಕ್ತಿಗಳ ನಡುವೆ ಅಭೇದ್ಯ ಗೋಡೆಯನ್ನೇ ನಿರ್ಮಿಸುವ ಸಾಧ್ಯತೆಗಳು ಇಂತಹ ಸಂದರ್ಭ ಗಳಲ್ಲಿ ಅಧಿಕ. ದಂಪತಿಗಳಲ್ಲಿ ಅತಿಯಾದ ಮತ್ತು ನಿರಂತರ ಸಾಮೀಪ್ಯದ ಪರಿಣಾಮಗಳ ಬಗ್ಗೆ, ಅಮೆರಿಕೆಯ ವಾಷಿಂಗ್ಟನ್ ಯೂನಿವರ್ಸಿಟಿಯ ಸಂಶೋಧನೆಯೊಂದು ಹೀಗೆ ಹೇಳುತ್ತದೆ. ಕೋವಿಡ್ ವಿಧಿಸಿದ ವರ್ಕ್ ಫ್ರಂ ಹೋಂ ಮತ್ತು ಯಾವಾಗಲೂ ಮನೆಯೊಳಗೇ ಇರಬೇಕಾದ ಅನಿವಾರ್ಯತೆ ಹಾಗಿರಲಿ, ಬೇರೆ ಸಂದರ್ಭಗಳಲ್ಲೂ ಸಹ ಪ್ರತಿ ವರ್ಷದ ಬೇಸಗೆ ರಜಗಳು ಹಾಗು ಕ್ರಿಸ್ಮಸ್ ರಜಗಳು ಜೀವನ ಸಂಗಾತಿಗಳಲ್ಲಿ ಅತಿಯಾದ ಸಾಮೀಪ್ಯ ಉಂಟುಮಾಡಿ ವಿಚ್ಛೇದನಕ್ಕೆ ರಂಗ ಸಜ್ಜಿಕೆ ಮಾಡುತ್ತವೆ.

ರಜೆಯ ನಂತರ ಬರುವ ಜನವರಿ ತಿಂಗಳಲ್ಲಿ ಅತಿ ಹೆಚ್ಚು ವಿಚ್ಛೇದನಗಳಾಗುತ್ತವೆ. ಆದ್ದರಿಂದ ಜನವರಿ ತಿಂಗಳಿಗೆ ‘ವಿಚ್ಛೇದನದ ತಿಂಗಳೆಂದೇ’ ಅಲ್ಲಿಯ ವಕೀಲರು ಅನ್ವರ್ಥ ನಾಮಕರಣ ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಡಿಸೆಂಬರ್‌ನಲ್ಲಿ ಪಾಶ್ಚಾತ್ಯ ದೇಶಗಳಲ್ಲಿರುವ ಹಲವು ದಿನಗಳ ರಜೆ ಎಂಬುದು ಕಟು ಸತ್ಯ!

ಆರ್ಥಿಕ ಪರಿಸ್ಥಿತಿ : ದಂಪತಿಗಳ ಆರ್ಥಿಕ ಪರಿಸ್ಥಿತಿಯೂ ಕೂಡ ಅವರ ಸಾಮರಸ್ಯದ ಕಾರಣ ವಾಗಿರುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಬಹುತೇಕ ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲರಾಗಿದ್ದು ಕೊಂಡು ಸಂಸಾರದ ನೊಗ ಹೊರುತ್ತಾರೆ. ಕೋವಿಡ್ ೧೯ ಲಾಕ್‌ಡೌನ್ ದಿನಗಳಲ್ಲಿ ಬಹಳಷ್ಟು ಜನರ ಉದ್ಯೋ ಗಕ್ಕೆ ಕುತ್ತು ಬಂದು, ಅವರ ಆರ್ಥಿಕ ಸ್ಥಿತಿ ಹದಗೆಟ್ಟು, ನಿತ್ಯ ಜಗಳ, ವಾಗ್ವಾದಗಳಿಂದ ಬೇಸತ್ತು, ಕೊನೆಗೆ ಬೇರ್ಪಡುವಿಕೆಗೆ ಶರಣಾಗಿದ್ದಾರೆ.

ಕೌಟುಂಬಿಕ ಹಿಂಸೆ: ಕುಟುಂಬದಲ್ಲಿ ಹಿಂಸಾಚಾರ ಕೋವಿಡ್ ಸಮಯದಲ್ಲಿ ಹೆಚ್ಚಾಗಿದೆ ಎಂಬುದು ಹಲವಾರು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೆಚ್ಚಿದ ಮಾನಸಿಕ ಹಾಗು ಆರ್ಥಿಕ ಅಸ್ಥಿರತೆ ಇದಕ್ಕೆ ಕಾರಣವಿರಬಹುದು ಎಂಬುದು ವಕೀಲರ ಹಾಗು ಮಾನಸಿಕ ತಜ್ಞರ ಅಂಬೋಣ. ವಿವಾಹೇತರ ಸಂಬಂಧಗಳು ಹಾಗು ದುಶ್ಚ ಟಗಳಿಗೆ ಲಕ್‌ಡೌನ್ ನಲ್ಲಿ ಕಡಿವಾಣ ಬಿದ್ದಿದ್ದರಿಂದ ಉಂಟಾದ ಹತಾಶ ಮನೋಭಾವನೆಯೂ ಸಹ ಕೌಟುಂಬಿಕ ಕ್ರೌರ್ಯತೆ ಹಾಗು ವಾದವಿವಾದಗಳಿಗೆ ಹಾದಿ ಮಾಡಿಕೊಟ್ಟಿರಬಹುದು.

ಕೌಟುಂಬಿಕ ಹಿಂಸಾಚಾರದ ಮಾನಸಿಕ ಪ್ರವೃತ್ತಿ ಕೆಲವರಲ್ಲಿ ಮರೆಯಾಗಿರುತ್ತದೆ. ಅತಿ ಹೆಚ್ಚಿನ ಸಾಮೀಪ್ಯ ಹಲವೊಮ್ಮೆ ದ್ವೇಷಕ್ಕೆ ಎಡೆಮಾಡಿದಾಗ ಈ ಪ್ರವೃತ್ತಿ ಹೊರಬಂದು ದೈಹಿಕ ಕಿರುಕುಳ ಆರಂಭವಾಗುತ್ತದೆ. ಇದೂ ಸಹ ವಿಚ್ಛೇದನದ ಕಾರಣವಾಗಿದೆ.

ಒಟ್ಟಾರೆ ಸಂಬಳದ ಕಡಿತ, ಕೆಲಸಗಳನ್ನು ಕಳೆದುಕೊಂಡಿದ್ದು, ಮನೆಗೆಲಸಗಳ ಹಂಚಿಕೆಯ ಜಿeಸೆ, ಮಕ್ಕಳನ್ನು ನೋಡಿಕೊಳ್ಳುವ ಬಗೆಗಿನ ಚರ್ಚೆ, ವಾದ ವಿವಾದ, ವೈಯುಕ್ತಿಕ ಪರಿಧಿಯ ಉಲ್ಲಂಘನೆ, ಹೊರಗೆ ಹೋಗಲಾಗದಿರುವಿಕೆ, ಮಾನಸಿಕ ಹಾಗು ದೈಹಿಕ ಹಿಂಸಾಚಾರ ಇವೆಲ್ಲವೂ ಈ ಸಾಂಕ್ರಾಮಿಕ ಸಮಯದಲ್ಲಿ ಅತಿಯಾಗಿ ಹೆಚ್ಚಿರುವ ವಿಚ್ಛೇದನಗಳಿಗೆ ಕಾರಣ ಎನ್ನಬಹುದೇನೋ.

ಕೋವಿಡ್ ಸಮಯದಲ್ಲಿ ದೊರೆತ ಸಮಯದಲ್ಲಿ ಒಬ್ಬರ ನಬ್ಬರು ಅರ್ಥೈಸಿಕೊಂಡು ತಮ್ಮ ವೈವಾಹಿಕ ಜೀವನವನ್ನು ಇನ್ನೂ ಉತ್ತಮ ಹಾಗು ಭದ್ರ ಗೊಳಿಸಿಕೊಂಡಿರುವ ಉದಾಹರಣೆಗಳೂ ಇವೆ. ಮನೆಯಲ್ಲೇ ಹೆಚ್ಚಿನ ಅವಧಿ ಇರುವ ಸನ್ನಿವೇಶವು ಕೆಲವು ಕುಟುಂಬಗಳಲ್ಲಿ ಪ್ರೀತಿಯನ್ನೂ ಹೆಚ್ಚಿಸಿವೆ, ವಿಶ್ವಾಸವನ್ನೂ ಬೆಳೆಸಿವೆ. ಲಾಕ್‌ಡೌನ್‌ನ್ನು ಸದುಪಯೋಗಪಡಿಸಿಕೊಂಡು, ಹೊಸ ಹೊಸ ಚಟುವಟಿಕೆಗಳಿಗೆ ತಮ್ಮನ್ನು ತೊಡಗಿಸಿ ಕೊಂಡವರ ಯಶಸ್ವೀ ಉದಾಹರಣೆಗಳೂ ನಮ್ಮ ನಡುವೆ ಇವೆ.

ಅದೇನೇ ಇದ್ದರೂ, ಈ ವೈರಸ್ ಜಗತ್ತಿನಾದ್ಯಂತ ಮಾಡಿರುವ ಹಾನಿ ಅಪಾರ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ಅಮೆರಿಕ ಮತ್ತು ಯುರೋಪಿನ ಹಲವು ಮುಂದುವರಿದ ದೇಶಗಳನ್ನು ಈ ವೈರಸ್ ಕಾಡಿರುವ, ಕಾಡುವುದನ್ನು ಮುಂದುವರಿಸಿರುವ ಪರಿಯೂ ಅನೂಹ್ಯ. ಕೋವಿಡ್-೧೯ ನಂತಹ ಒಂದು ಸಾಂಕ್ರಾಮಿಕ ರೋಗ ನಮ್ಮ ದೇಹವನ್ನು ಮಾತ್ರವಲ್ಲ, ಪೂರ್ತಿ ಸಮಾಜವನ್ನೇ ಅಡಿಸುವ ಶಕ್ತಿ ಹೊಂದಿದೆ ಎಂಬ ವಿಷಯ ನಮ್ಮ ಬೆನ್ನಿನ ಹುರಿಯನ್ನೇ ತಣ್ಣಗಾಗಿಸುತ್ತದೆ.

ಮನೆ ಕೆಲಸದ ಒತ್ತಡ
ಕುಟುಂಬವೊಂದರಲ್ಲಿ, ದಿನನಿತ್ಯದ ಮನೆಕೆಲಸದ ಬಹುಭಾಗ ಹೆಣ್ಣಿನ ಜವಾಬ್ದಾರಿ. ಬೆಳಗಿನ ತಿಂಡಿ ತಯಾರಿ, ಅಡುಗೆ, ಮಕ್ಕಳಿಗೆ ಕಾಲದಿಂದ ಕಾಲಕ್ಕೆ ಆಹಾರ ನೀಡುವುದು ಮೊದಲಾದ ಎಲ್ಲಾ ಜವಾಬ್ದಾರಿಗಳು ಸಾಮಾನ್ಯವಾಗಿ ಹೆಣ್ಣಿನ ಮೇಲಿರುತ್ತದೆ. ಈಗಿನ ದಿನಗಳಲ್ಲಿ ಮನೆಗೆಲಸವನ್ನು ಕೆಲವು ಗಂಡಂದಿರು ಹಂಚಿಕೊಳ್ಳುತ್ತಾ, ಮಡದಿಗೆ ಸಹಾಯ ಮಾಡುವುದು ಒಳ್ಳೆಯ ಲಕ್ಷಣ. ಆದರೆ ಕೆಲವು ಕುಟುಂಬಗಳಲ್ಲಿ ಹೆಂಡತಿಯೇ ಈ ಎಲ್ಲಾ ಹೊಣೆಗಳನ್ನು ಹೊತ್ತಾಗ, ಒತ್ತಡ ಸಹಜ.

ಲಾಕ್‌ಡೌನ್ ಸಮಯದಲ್ಲಿ , ಹೆಂಡತಿ ಮನೆಯಿಂದಲೇ ತನ್ನ ವೃತ್ತಿ ನಿಭಾಯಿಸುವಾಗ, ಮನೆಗೆಲಸಗಳಲ್ಲಿ ಗಂಡ ಅವಳ ಕೈಜೋಡಿಸದಿದ್ದರೆ, ಮಾನಸಿಕ ಒತ್ತಡದಿಂದ ಆಕೆ ಝರ್ಜರಿತಳಾಗುವ ಸಾಧ್ಯತೆ ಇದೆ. ತಿಂಗಳುಗಟ್ಟಲೆ ಮನೆಯಿಂದಲೇ ಕೆಲಸ, ಗಂಡ – ಹೆಂಡಿರಿಬ್ಬರೂ ಮನೆಯಲ್ಲೇ ಇರುವ ಅನಿವಾರ್ಯತೆ, ಮನೆಗೆಲಸವನ್ನೂ ಮಾಡುವ ಸಂಕಷ್ಟ – ಇವೆಲ್ಲವೂ ಸೇರಿ, ಮಡದಿಯ ತಾಳ್ಮೆಯ ಕಟ್ಟೆ ಒಡೆಯಲೂ ಬಹುದು, ಕೆಲವು ತೀವ್ರ ಕ್ಷಣಗಳಲ್ಲಿ
ವಿಚ್ಛೇದನವೊಂದೇ ಪರಿಹಾರ ಎನ್ನಿಸಬಹುದು.