ರಂಗಭೂಮಿಯನ್ನೇ ನಂಬಿದ್ದವರ ಬದುಕು ಮೂರಾಬಟ್ಟೆ
ಕೋವಿಡ್ ನಿಯಮಗಳ ಪ್ರಕಾರ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಮನವಿ
ವಿಶೇಷ ವರದಿ: ಹುಚ್ಚೇಶ ಯಂಡಿಗೇರಿ ಗುಳೇದಗುಡ್ಡ
ಟಿವಿ, ಮೊಬೈಲ್ ಹಾವಳಿಯಿಂದಾಗಿ ನಾಟಕಗಳು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಇಂತಹ ಸಂದರ್ಭದಲ್ಲಿ ವಕ್ಕರಿಸಿದ ಕರೋನಾ ಮಹಾಮಾರಿ ಯಿಂದಾಗಿ ನಾಟಕಗಳು ಮತ್ತಷ್ಟು ಕುಗ್ಗಿಹೋಗಿವೆ.
ನಾಟಕ ನೋಡುವವರು ಇಲ್ಲದಂತಾಗಿದೆ. ಇಂತಹ ಕ್ಷೇತ್ರಗಳನ್ನೇ ನಂಬಿಕೊಂಡ ಕಲಾವಿದರು ಈಗ ಬೇರೆ ದಾರಿ ಹುಡುಕಿಕೊಳ್ಳುವ ಅನಿವಾರ್ಯತೆ ಬಂದಿದೆ. ಅನೇಕ ಕಲಾವಿದರು, ತಂತ್ರಜ್ಞರು, ಕಾರ್ಮಿಕರು, ಮಾಲೀಕರು ರಂಗಭೂಮಿಯಿಂದಲೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ
ಕರೋನಾದಿಂದಾಗಿ ನಾಟಕ ಪ್ರದರ್ಶನಗಳು ನಿಂತು ಹೋಗಿದ್ದರಿಂದ ಇವರ ಬದುಕು ಮೂರಾ ಬಟ್ಟೆಯಾಗಿದೆ.
ಕೂಲಿಗೆ ಹೊರಟ ಕಲಾವಿದರು: ಉತ್ತರ ಕರ್ನಾಟಕದ ದೊಡ್ಡ ಜಾತ್ರೆಯಾದ ಬಾದಾಮಿ ಶ್ರೀಬನಶಂಕರಿ ಜಾತ್ರೆ ರಂಗಭೂಮಿ ಕಲಾವಿದರಿಗೆ ಅನ್ನಹಾಕುವ ಜಾತ್ರೆ. ತಿಂಗಳುಗಟ್ಟಲೇ ನಡೆಯುವ ಈ ಜಾತ್ರೆಯಲ್ಲಿ ಹತ್ತಾರು ನಾಟಕ ಕಂಪನಿಗಳು ತಮ್ಮ ನಾಟಕ ಕ್ಯಾಂಪ್ಗಳನ್ನು ಹಾಕಿ, ಹಗಲು -ರಾತ್ರಿ ನಾಟಕ ಪ್ರದರ್ಶನ ನಡೆಸಿ, ಅರ್ಧ ವರ್ಷಕ್ಕಾಗುವಷ್ಟು ದುಡಿಮೆ ಮಾಡುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಕರೋನಾ ಮಹಾಮಾರಿ ಯಿಂದಾಗಿ ಬನಶಂಕರಿ ಜಾತ್ರೆ ರದ್ದಾಗಿದ್ದು, ನಾಟಕ ಪ್ರದರ್ಶನಗಳು ನಿಂತುಹೋಗಿವೆ. ಇದರಿಂದ ಕಂಪನಿ ಮಾಲೀಕರು, ಕಲಾವಿದರು, ಕಾರ್ಮಿಕರು ಜೀವನ ನಿರ್ವಹಣೆ ಮಾಡಲು ಪರದಾಡುವಂತಾಗಿದೆ. ಕೆಲವು ಕಲಾವಿದರು ಬಣ್ಣ ಹಚ್ಚುವುದನ್ನು ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.
೧೭ ರಂದು ನಡೆಯಬೇಕಿದ್ದ ಜಾತ್ರೆ: ಕಳೆದ ಬಾರಿ ಬಾದಾಮಿ ಬನಶಂಕರಿ ಜಾತ್ರೆ ನಡೆಯಲಿಲ್ಲ. ಈ ಬಾರಿ ಯಾದರೂ ಜಾತ್ರೆ ನಡೆದೀತು ಎಂದು ನಂಬಿದ್ದ ರಂಗ ಭೂಮಿ ಕಲಾವಿದರಿಗೆ ಮತ್ತೆ ಈ ಬಾರಿ ಕರೋನಾ ಮೂರನೇ ಅಲೆ ಭೀತಿ ಹುಟ್ಟಿಸಿದೆ. ಜ.೧೭ರ ಬನದ ಹುಣ್ಣಿಮೆಯಂದು ನಡೆಯಬೇಕಾಗಿದ್ದ ಶ್ರೀ ಬನಶಂಕರಿ ಜಾತ್ರೆಯನ್ನು ಜಿಲ್ಲಾಡಳಿತ ರದ್ದು ಮಾಡಿ, ನಾಟಕ ಪ್ರದನ, ಅಂಗಡಿ ಮುಂಗಟ್ಟುಗಳನ್ನು ಹಾಕುವುದು ನಿಷೇಧಿಸಿದೆ. ಇದು ರಂಗಭೂಮಿ ಕಲಾವಿದರಿಗೆ ಬರಸಿಡಿಲು ಬಡೆದಂತಾಗಿದೆ.
ಹತ್ತಕ್ಕೂ ಹೆಚ್ಚು ನಾಟಕ ಕಂಪನಿಗಳಿಗೆ ಆಘಾತ:ಪ್ರತಿ ವರ್ಷ ಬನಶಂಕರಿ ಜಾತ್ರೆಗಾಗಿಯೇ ಹೊಸ ಹೊಸ ನಾಟಕಗಳನ್ನು ರಚಿಸಿ, ಪ್ರದರ್ಶನ ನೀಡಲಾಗುತ್ತಿತ್ತು. ಒಂದು ತಿಂಗಳ ಕಾಲ ಇಲ್ಲಿ ಯಶಸ್ವಿ ಪ್ರದರ್ಶನ ಕಂಡ ನಾಟಕಗಳು ರಾಜ್ಯಾದ್ಯಂತ ಹೆಸರು ಮಾಡುತ್ತಿದ್ದವು. ಯಶಸ್ವಿ ನಾಟಕ ಕಂಪನಿಗಳು ಸುಮಾರು ೨೦-೨೫ ಲಕ್ಷ ರು. ಆದಾಯ ಗಳಿಸುತ್ತಿದ್ದವು ಎನ್ನಲಾಗುತ್ತಿದೆ.
ಸಾವಿರಾರು ಕಲಾವಿದರು ಇದೇ ಆದಾಯದಲ್ಲಿಯೇ ವರ್ಷಪೂರ್ತಿ ಜೀವನ ನಡೆಸುತ್ತಿದ್ದರು. ದಾವಣಗೆರೆ, ಗುಬ್ಬಿ, ಇಲಕಲ್ಲ, ಕಮತಗಿ, ತಾಳಿಕೋಟೆ, ಗುಳೇದಗುಡ್ಡ, ಆಶಾಪೂರ, ಕುಂಟೋಜಿ, ಕಲ್ಲೂರ, ಆಲೂರು ಸೇರಿದಂತೆ ಹತ್ತಕ್ಕೂ ಹೆಚ್ಚು ನಾಟಕ ಕಂಪನಿಗಳು ತಿಂಗಳುಗಟ್ಟಲೇ ನಾಟಕ ಪ್ರದರ್ಶನ ನೀಡುತ್ತಿದ್ದವು. ಧಾರಾವಾಹಿ ಕಲಾವಿದರನ್ನು ನಾಟಕಗಳಿಗೆ ಕರೆಯಿಸಿ, ನಾಟಕ ಪ್ರದರ್ಶನ ನೀಡುತ್ತಿದ್ದರು. ಆದರೆ ಈ ಬಾರಿ ಬನಶಂಕರಿ ಜಾತ್ರೆ ರದ್ದು ಮಾಡಿದ್ದರಿಂದ ಈ ಎಲ್ಲ ನಾಟಕ ಕಂಪನಿಗಳಿಗೆ ಆಘಾತ ಉಂಟಾಗಿದೆ.
***
ಸಿನಿಮಾ ಪ್ರದರ್ಶನ, ಬಸ್ ಪ್ರಯಾಣಕ್ಕೆ ಶೇ.೫೦ರಷ್ಟು ಜನರಿಗೆ ಅವಕಾಶ ನೀಡಿದ್ದು, ಜಾತ್ರೆಯಲ್ಲಿ ನಾಟಕ ಪ್ರದರ್ಶನಕ್ಕೆ ನಮಗೂ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಅವಕಾಶ ನೀಡಬೇಕು. ನಮ್ಮ ನಾಟಕ ಕಂಪನಿಯಿಂದ ಕೋವಿಡ್ ಜಾಗೃತಿ ಮೂಡಿಸುವುದರ ಜತೆಗೆ ಒಂದು ಟಿಕೆಟ್ಗೆ ಒಂದು ಮಾಸ್ಕ್ ಉಚಿತವಾಗಿ ನೀಡಿ ಕೋವಿಡ್ ನಿಯಮ ಪಾಲಿಸುತ್ತೇವೆ. ಇದರಿಂದ ರಂಗಭೂಮಿ ಕಲಾವಿದರಿಗೆ ಬದುಕು ನೀಡಿದಂತಾಗುತ್ತದೆ.
-ಭರತ್ ತಾಳಿಕೋಟಿ, ಮಾಲೀಕರು, ಖಾಸ್ಗತೇಶ್ವರ ನಾಟ್ಯ ಸಂಘ
ರಾಜ್ಯದಲ್ಲಿ ಚುನಾವಣೆ, ಪಾದಯಾತ್ರೆಗಳು ನಡೆಯುತ್ತಿವೆ. ಸರಕಾರ ಬಾದಾಮಿ ಬನಶಂಕರಿ ಜಾತ್ರೆಯನ್ನು ರದ್ದು ಮಾಡಿದರೂ ನಮಗೆ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ರಾತ್ರಿ ಕರ್ಫ್ಯೂ ರದ್ದು ಮಾಡಬೇಕು. ನಾವು ಕೋವಿಡ್ ನಿಯಮದಂತೆ ನಾಟಕ ಪ್ರದರ್ಶನ ಮಾಡುತ್ತೇವೆ. ಇದರಿಂದ ನಮ್ಮ ಕಲಾವಿದರಿಗೆ
ನೆರವಾಗುತ್ತದೆ. ನಾಟಕ ಪ್ರದರ್ಶನಕ್ಕೆ ಅವಕಾಶ ನೀಡದಿದ್ದರೆ ಹೋರಾಟ ಮಾಡುತ್ತೇವೆ.
-ಜ್ಯೋತಿ ಗುಳೇದಗುಡ್ಡ, ಮಾಲೀಕರು, ಸಂಗಮೇಶ್ವರ ನಾಟ್ಯ ಸಂಘ
ಗುಳೇದಗುಡ್ಡ