Tuesday, 10th December 2024

Mohammed Shami: ಕಮ್‌ಬ್ಯಾಕ್‌ ಪಂದ್ಯದಲ್ಲಿ 4 ವಿಕೆಟ್‌ ಕಿತ್ತು ಮಿಂಚಿದ ಶಮಿ

ಇಂದೋರ್‌: ವರ್ಷದ ಬಳಿಕ ಆಡಲಿಳಿದ ಮೊದಲ ಪಂದ್ಯದಲ್ಲಿ ಮೊಹಮ್ಮದ್‌ ಶಮಿ(Mohammed Shami) ಬೆಂಕಿ ಬೌಲಿಂಗ್‌ ದಾಳಿ ನಡೆಸಿ 4 ವಿಕೆಟ್‌ ಕಿತ್ತು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಇಂದೋರ್‌ನಲ್ಲಿ ನಡೆಯುತ್ತಿರುವ ರಣಜಿ ಎಲೈಟ್‌ ಗ್ರೂಪ್‌ ‘ಸಿ’ ವಿಭಾಗದ ಮಧ್ಯ ಪ್ರದೇಶ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ ಘಾತಕ ಬೌಲಿಂಗ್‌ ನಡೆಸಿ ಗಮನಸೆಳೆದರು. ಶಮಿಯ ಈ ಪ್ರದರ್ಶನದಿಂದ ಬಿಸಿಸಿಐ ಕೂಡ ಸಂತಸಗೊಂಡಿದ್ದು ಶೀಘ್ರದಲ್ಲೇ ಆಸೀಸ್‌ ಸರಣಿಗೆ ಭಾರತ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದ ಬಳಿಕ ಶಮಿ ಆಡಿದ ಮೊದಲ ಪಂದ್ಯ ಇದಾಗಿತ್ತು.

ಬಂಗಾಳ ಪರ ಕಣಕ್ಕಿಳಿದ್ದ ಶಮಿ ಮೊದಲ ಇನಿಂಗ್ಸ್‌ನಲ್ಲಿ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ 19 ಓವರ್‌ ಬೌಲಿಂಗ್‌ ನಡೆಸಿ 4 ಓವರ್‌ ಮೇಡನ್‌ ಸಹಿತ 54 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕಿತ್ತರು. ಅವರ ಈ ಬೌಲಿಂಗ್‌ ದಾಳಿಯಿಂದ ಮಧ್ಯಪ್ರದೇಶ ಕೇವಲ 167 ರನ್‌ಗೆ ಸರ್ವಪತನ ಕಂಡಿತು. ಮೊದಲ ಇನಿಂಗ್ಸ್‌ನ ಮುನ್ನಡೆಯೊಂದಿಗೆ ಬಂಗಾಳ ದ್ವಿತೀಯ ಇನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದೆ. ಬಂಗಾಳ ಮೊದಲ ಇನಿಂಗ್ಸ್‌ನಲ್ಲಿ 228 ರನ್‌ ಬಾರಿಸಿತ್ತು.

ಆಸೀಸ್‌ ಪ್ರವಾಸ ಕೈಗೊಂಡಿರುವ ತಂಡದಲ್ಲಿ ಅನುಭವಿ ಬೌಲರ್‌ಗಳಾಗಿ ಇರುವುದು ಕೇವಲ 2 ಮಾತ್ರ. ಅವರೆಂದರೆ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್. ಇವರನ್ನು ಹೊರತುಪಡಿಸಿ ಬೇರ್ಯಾವ ಹಿರಿಯ ವೇಗಿಯೂ ಇಲ್ಲ. ಶಮಿ ತಂಡ ಕೂಡಿ ಕೊಂಡರೆ ಬಲ ಹೆಚ್ಚಲಿದೆ. ಹೀಗಾಗಿ ಶಮಿಯ ಪ್ರದರ್ಶನದ ಮೇಲೆ ಆಸ್ಟ್ರೇಲಿಯಾ ಕೂಡ ಕಣ್ಣಿಡಲಿದೆ. ಇದುವರೆಗೂ ಶಮಿ ಆಸ್ಟ್ರೇಲಿಯಾ ಎದುರು 12 ಟೆಸ್ಟ್ ಪಂದ್ಯಗಳನ್ನಾಡಿದ್ದು, 44 ವಿಕೆಟ್ ಕಬಳಿಸುವ ಮೂಲಕ ಕಾಂಗರೂ ಪಡೆಯನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ಇನ್ನು ಆಸೀಸ್‌ ನೆಲದಲ್ಲಿ 8 ಟೆಸ್ಟ್‌ ಪಂದ್ಯಗಳನ್ನಾಡಿದ್ದು 31 ಟೆಸ್ಟ್ ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ IND vs AUS: ಹೊಸ ಉಡುಪು, ಹೊಸ ಹುರುಪಿನೊಂದಿಗೆ ಟೀಮ್‌ ಇಂಡಿಯಾ ಅಭ್ಯಾಸ

ಅಭ್ಯಾಸ ಆರಂಭಿಸಿದ ಭಾರತ

ಆಸೀಸ್‌ ವಿರುದ್ಧದ ಸರಣಿಗೆ ಭಾರತೀಯ ಆಟಗಾರರು ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ಫಾರ್ಮ್‌ ಕಳೆದುಕೊಂಡಿರುವ ವಿರಾಟ್‌ ಕೊಹ್ಲಿ, ರಾಹುಲ್‌ ಗುರುವಾರ ಕೋಚ್‌ ಗಂಭೀರ್‌ ಮಾರ್ಗದರ್ಶನದಲ್ಲಿ ಹೆಚ್ಚುವರಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ವೇಗಿ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಕೂಡ ಹಲವು ಓವರ್‌ ಬೌಲಿಂಗ್‌ ನಡೆಸಿ ನೆಟ್ಸ್‌ನಲ್ಲಿ ಬೆವರಿಳಿಸಿದರು.