ಡೆಹ್ರಾಡೂನ್: ಮೇಲ್ಜಾತಿಯ (Upper-Caste) ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಬೆಳಸಿದ ಎಂಬ ಕ್ಷುಲಕ ಕಾರಣಕ್ಕೆ 18 ವರ್ಷದ ದಲಿತ ಯುವಕನನ್ನು ಕ್ರೂರವಾಗಿ ಥಳಿಸಿ ಹತ್ಯೆ ಮಾಡಿರುವ ಆರೋಪ ಉತ್ತರಾಖಂಡದ ತೆಹ್ರಿ ಗಢ್ವಾಲ್ ಜಿಲ್ಲೆಯಲ್ಲಿ ಕೇಳಿಬಂದಿದೆ. ಈ ಘಟನೆಯಲ್ಲಿ ಯುವಕನ ಸ್ನೇಹಿತನೂ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬೆಳಕಿಗೆ ಬಂದ ಬಳಿಕ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಗಳು ಕೇಳಿಬಂದಿವೆ.
ಮೃತ ಯುವಕನನ್ನು ದೇವಲ್ ಗ್ರಾಮದ ನಿವಾಸಿ ಕೇತನ್ ಲಾಲ್ ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ಆತನ ಸ್ನೇಹಿತ ದಿವಾಕರ್ ದಿಮ್ರಿ ಅವರನ್ನು ಬೌರಾರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಕೇತನ್ ಲಾಲ್ ಮತ್ತು ಖೋಲ್‌ಗಢ್ ಗ್ರಾಮದ ಮೇಲ್ಜಾತಿಯ ಅಪ್ರಾಪ್ತ ಬಾಲಕಿಯ ನಡುವೆ ಕಳೆದ ಸುಮಾರು ಆರು ತಿಂಗಳಿಂದ ಸ್ನೇಹವಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕಿಯ ಕುಟುಂಬದವರು ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ.
ಭಾನುವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಬಾಲಕಿ ಕೇತನ್‌ಗೆ ಮೊಬೈಲ್ ಮೂಲಕ ಕರೆ ಮಾಡಿ ಗ್ರಾಮಕ್ಕೆ ಬರಲು ತಿಳಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಾದ ಬಳಿಕ ಕೇತನ್ ತನ್ನ ಸ್ನೇಹಿತ ದಿವಾಕರ್ ದಿಮ್ರಿ ಜೊತೆಗೆ ಖೋಲ್‌ಗಢ್ ಗ್ರಾಮಕ್ಕೆ ತೆರಳಿದ್ದಾನೆ. ಗ್ರಾಮಕ್ಕೆ ತಲುಪಿದ ಕೂಡಲೇ ಬಾಲಕಿಯ ಕುಟುಂಬದ ಸದಸ್ಯರು ಮತ್ತು ಇತರರು ಇಬ್ಬರನ್ನೂ ಒಂದು ಕೊಠಡಿಯಲ್ಲಿ ಬಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮರದ ಕೋಲುಗಳು ಹಾಗೂ ಇತರ ವಸ್ತುಗಳಿಂದ ನಿರಂತರವಾಗಿ ಥಳಿಸಲಾಗಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೊದಲ್ಲಿ ಚಿನ್ನ ತೋರಿಸಿದ ಯುಟ್ಯೂಬರ್; ಮನೆಯಿಂದ ಲಕ್ಷಾಂತರ ರುಪಾಯಿ ಮೌಲ್ಯದ ಆಭರಣ ಕಳವು
ಸೋಮವಾರ ಬೆಳಿಗ್ಗೆ ಬಾಲಕಿಯ ತಂದೆ ಕೇತನ್ ತಂದೆ ಧನಪಾಲ್ ಲಾಲ್ ಅವರಿಗೆ ಕರೆ ಮಾಡಿ, ಮಗನನ್ನು ಕರೆದುಕೊಂಡು ಹೋಗುವಂತೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಧನಪಾಲ್ ಲಾಲ್ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಚೌಂಡ್ ಲಂಬಗಾಂವ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಕೇತನ್ ಮೃತಪಟ್ಟಿದ್ದಾನೆ.
ಇನ್ನೊಂದೆಡೆ, ಗಾಯಗೊಂಡ ದಿವಾಕರ್ ದಿಮ್ರಿಯನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆತನ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದು, ಕೇತನ್ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ನ್ಯಾಯ ಸಿಗುವವರೆಗೆ ಮೃತದೇಹವನ್ನು ಸ್ವೀಕರಿಸುವುದಿಲ್ಲ ಎಂದು ಕುಟುಂಬ ಸದಸ್ಯರು ಕೆಲಕಾಲ ಪಟ್ಟು ಹಿಡಿದಿದ್ದು, ಸ್ಥಳದಲ್ಲಿ ಒಂದಷ್ಟು ಕಾಲ ಉದ್ವಿಗ್ನತೆ ಎದುರಾಗಿರುವ ಘಟನೆಯೂ ನಡೆದಿದೆ.
Koppal Horror: ಆನ್‌ಲೈನ್ ಗೇಮ್ ಆಡದಂತೆ ಬುದ್ಧಿಮಾತು; ಕೊಪ್ಪಳದಲ್ಲಿ ತಂದೆ, ಅಕ್ಕನನ್ನು ಕತ್ತು ಸೀಳಿ ಕೊಂದ ಬಾಲಕ!
ತೆಹ್ರಿ ಗಢ್ವಾಲ್ ಜಿಲ್ಲಾ ಹಿರಿಯ ಪೊಲೀಸ್ ಅಧೀಕ್ಷಕಿ ಶ್ವೇತಾ ಚೌಬೆ ಅವರು ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಕೇತನ್ ತಂದೆಯ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಪರಿಶಿಷ್ಟ ಜಾತಿಗೆ ಸೇರಿದ ಯುವಕನ ಮೇಲಿನ ದೌರ್ಜನ್ಯ ಹಿನ್ನೆಲೆ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(2)(v) ಅಡಿಯಲ್ಲಿ ಸಹ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಯಶ್ವೀರ್ ಸಿಂಗ್ ಪಂವಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತರ ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಈ ಘಟನೆ ಮತ್ತೊಮ್ಮೆ ಜಾತಿ ಆಧಾರಿತ ಹಿಂಸಾಚಾರ ಮತ್ತು ಸಾಮಾಜಿಕ ಅಸಮಾನತೆ ಕುರಿತ ಚರ್ಚೆಗೆ ಕಾರಣವಾಗಿದ್ದು, ರಾಜ್ಯದ ವಿವಿಧ ದಲಿತ ಸಂಘಟನೆಗಳು ಹಾಗೂ ಮಾನವ ಹಕ್ಕು ಹೋರಾಟಗಾರರು ಪ್ರಕರಣದ ಸಮಗ್ರ ತನಿಖೆ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.