ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Pune Horror: ಪುಣೆ ಅತ್ಯಾಚಾರ ಪ್ರಕರಣ: ಶಂಕಿತನ ಫೋಟೋ ಬಿಡುಗಡೆ, ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ

ಪುಣೆಯ ಸ್ವರ್ಗೇಟ್ ಬಸ್ ಡಿಪೋದಲ್ಲಿ 26 ವರ್ಷದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದೀಗ ಶಂಕಿತ ಆರೋಪಿಯ ಫೋಟೋವನ್ನು ಬಿಡುಗಡೆ ಮಾಡಿದ್ದು, ಈತನ ಸುಳಿವು ನೀಡಿದವರಿಗೆ 1 ಲಕ್ಷ ರೂ. ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.

ಪುಣೆ ಅತ್ಯಾಚಾರ ಕೇಸ್‌; ಆರೋಪಿಯ ಫೋಟೋ ಬಿಡುಗಡೆ

ಶಂಕಿತ ಆರೋಪಿಯ ಭಾವಚಿತ್ರ

Profile Vishakha Bhat Feb 27, 2025 1:05 PM

ಮುಂಬೈ: ಪುಣೆಯ ಸ್ವರ್ಗೇಟ್ ಬಸ್ ಡಿಪೋದಲ್ಲಿ 26 ವರ್ಷದ ಮಹಿಳೆಯ ಮೇಲೆ ಬಸ್‌ನಲ್ಲಿ ಮಂಗಳವಾರ ಬೆಳಿಗ್ಗೆ 5.30 ರ ಸುಮಾರಿಗೆ ಅತ್ಯಾಚಾರ (Pune Horror) ನಡೆದಿದೆ. ರೋಪಿಯನ್ನು ದತ್ತಾತ್ರೇಯ ರಾಮದಾಸ್ ಗಡೆ ಎಂದು ಗುರುತಿಸಲಾಗಿದೆ. ಮಹಿಳೆಯು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದೀಗ ಪೊಲೀಸರು ಆರೋಪಿಯ ಫೋಟೋ ಬಿಡುಗಡೆ ಮಾಡಿದ್ದಾರೆ. ಆರೋಪಿಯ ಸುಳಿವು ನೀಡಿದವರಿಗೆ 1 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಆರೋಪಿಗೆ ಅಪರಾಧ ಹಿನ್ನೆಲೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

36 ವರ್ಷದ ದತ್ತಾತ್ರೇಯ ರಾಮದಾಸ್ ಗಡೆ ವಿರುದ್ಧ ಈ ಹಿಂದೆಯೇ ಹಲವು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. ಪುಣೆ ಮತ್ತು ನೆರೆಯ ಅಹಲ್ಯಾನಗರ ಜಿಲ್ಲೆಯಲ್ಲಿ ಕನಿಷ್ಠ ಆರು ಕಳ್ಳತನ, ದರೋಡೆ ಮತ್ತು ಸರಗಳ್ಳತನದ ಆರೋಪವಿದೆ. ಆತ 2019 ರಿಂದ ಜಾಮೀನಿನ ಮೇಲೆ ಹೊರಗಿದ್ದಾನೆ. ಸದ್ಯ ಆತನನ್ನು ಪತ್ತೆ ಮಾಡಲು ಪೊಲೀಸರು ಅಪರಾಧ ವಿಭಾಗದ ಎಂಟು ತಂಡಗಳು ಸೇರಿದಂತೆ 13 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಬುಧವಾರ ಪುಣೆ ಪೊಲೀಸ್ ತಂಡ ಆರೋಪಿಯ ಸಹೋದರನನ್ನು ವಿಚಾರಣೆ ನಡೆಸಿದೆ. ಸ್ವರ್ಗೇಟ್ ಬಸ್ ನಿಲ್ದಾಣ ಮತ್ತು ಹತ್ತಿರದ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಮಹಿಳೆ ಆರೋಪಿಯೊಂದಿಗೆ ಬಸ್ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ ಎಂದು ಉಪ ಪೊಲೀಸ್ ಆಯುಕ್ತೆ ಸ್ಮಾರ್ತನಾ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.



ಆರೋಪಿಯನ್ನು ಪತ್ತೆ ಮಾಡಲು ಎಲ್ಲಾ ಬಸ್‌ ಹಾಗೂ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್‌ ತಂಡಗಳನ್ನು ನಿಯೋಜಿಸಲಾಗಿದೆ. ಶೀಘ್ರವಾಗಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಏನಿದು ಘಟನೆ?

ಫೆ. 25ರ ಬೆಳಗ್ಗೆ ಮಹಿಳೆ ಪ್ಲಾಟ್‌ಫಾರ್ಮ್‌ನಲ್ಲಿ ಪೈಥಾನ್‌ಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದಾಗ, ಒಬ್ಬ ವ್ಯಕ್ತಿ ಮಹಿಳೆ ಬಳಿಗೆ ಬಂದು ಸಹೋದರಿ ಎಂದು ಕರೆದು ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿದ್ದಾನೆ. ಆಕೆಯನ್ನು ನಿಲ್ದಾಣದ ಆವರಣದಲ್ಲಿ ಬೇರೆಡೆ ನಿಲ್ಲಿಸಿದ್ದ ಶಿವಶಾಹಿ ಎಸಿ ಬಸ್ಸಿನ ಬಳಿಗೆ ಕರೆದೊಯ್ದಿದ್ದಾನೆ. ನಂತರ ಬಸ್ಸಿನೊಳಗಿನ ದೀಪಗಳು ಉರಿಯದ ಕಾರಣ ಮೊದಲು ಬಸ್ ಹತ್ತಲು ಹಿಂಜರಿದಳು, ಆದರೆ ಆ ವ್ಯಕ್ತಿ ಅದು ಸರಿಯಾದ ವಾಹನ ಎಂದು ಮನವೊಲಿಸಿ ಒಳಗೆ ಹೋಗಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದಾನೆ.ಅಲ್ಲದೇ ಈ ಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿದ್ದಾನೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಈ ಸುದ್ದಿಯನ್ನೂ ಓದಿ: Pune Horror: ನಿರ್ಭಯಾ ಘಟನೆ ಮಾದರಿ ಕೃತ್ಯ; ಪೊಲೀಸ್‌ ಠಾಣೆಯಿಂದ 100 ಮೀ. ದೂರದಲ್ಲಿ ಬಸ್‌ನೊಳಗೆ ಮಹಿಳೆ ಮೇಲೆ ಅತ್ಯಾಚಾರ

ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ. ಶಿವಸೇನೆ (ಯುಬಿಟಿ) ನಾಯಕ ವಸಂತ್ ಮೋರ್ ನೇತೃತ್ವದ ಪ್ರತಿಭಟನಾಕಾರರು ಬುಧವಾರ ನಗರದ ಭದ್ರತಾ ಕಚೇರಿ ಮತ್ತು ಅಪರಾಧ ನಡೆದ ಬಸ್ ಅನ್ನು ಧ್ವಂಸಗೊಳಿಸಿದ್ದಾರೆ. ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.