Monday, 9th December 2024

ಉತ್ತರ ಪ್ರದೇಶದಲ್ಲಿ ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ದರೋಡೆಕೋರ ಫಹೀಮ್‌ನ ಸೆರೆ; ಬುಲ್ಡೋಜರ್​ನಿಂದ ಮನೆ ನೆಲಸಮ

Theft Case

ಲಖನೌ: ಕಳವು ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ಫಹೀಮ್ ಅಲಿಯಾಸ್ ಎಟಿಎಂನನ್ನು ಉತ್ತರ ಪ್ರದೇಶ (Uttar Pradesh)ದಲ್ಲಿ ಬಂಧಿಸಲಾಗಿದೆ. ಜತೆಗೆ ಅಲ್ಲಿರುವ ಆತನ ಮನೆಯನ್ನು ಬುಲ್ಡೋಜರ್​​ನಿಂದ ನೆಲಸಮಗೊಳಿಸಲಾಗಿದೆ. ʼʼಫಹೀಮ್‌ನನ್ನು ಉತ್ತರ ಪ್ರದೇಶದ ಮುರ್ದಾಬಾದ್ ಪೊಲೀಸರು ಕೆಲವು ದಿನಗಳ ಹಿಂದೆ ಆತನನ್ನು ಸೆರೆ ಹಿಡಿಯಲಾಗಿದೆʼʼ ಎಂದು ಮೂಲಗಳು ತಿಳಿಸಿವೆ (Theft Case).

ದೇಶಾದ್ಯಂತ ಕಳವು

ಫಹೀಮ್ ಗ್ಯಾಂಗ್ ಬೆಂಗಳೂರಿನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಕಳ್ಳತನ, ದರೋಡೆ ಕೃತ್ಯಗಳಲ್ಲಿ ಶಾಮೀಲಾಗಿತ್ತು. ಈತನಿಗಾಗಿ ಬೆಂಗಳೂರು ಪೊಲೀಸರು ಮಾತ್ರವಲ್ಲದೆ, ವಿವಿಧ ರಾಜ್ಯಗಳ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈ ಹಿಂದೆ ಅಪರಾಧ ಪ್ರರಕಣದಲ್ಲಿ ಜೈಲು ಸೇರಿದ್ದ ಫಹೀಮ್ ಪೆರೋಲ್ ಮೇಲೆ ಹೊರಬಂದು ಮತ್ತೆ ಕಳ್ಳತನದಂತಹ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿದ್ದ.

ಬರೋಬ್ಬರಿ 65 ಪ್ರಕರಣ

ಈತನ ವಿರುದ್ಧ ದೇಶಾದ್ಯಂತ ಬರೋಬ್ಬರಿ 65 ಪ್ರಕರಣ ದಾಖಲಾಗಿವೆ. ಈ ಬಗ್ಗೆ ತನಿಖೆ ಚುರುಕುಗೊಳ್ಳಲಿದೆ. ಸದ್ಯ ಫಹೀಮ್​ನನ್ನು ವಶಕ್ಕೆ ಪಡೆಯಲು ಕೊಡಿಗಹಳ್ಳಿ ಪೊಲೀಸರು ಮುಂದಾಗಿದ್ದಾರೆ. ಈ ವರ್ಷದ ಏ. 24ರಂದು ಫಹೀಮ್ ಮತ್ತು ಗ್ಯಾಂಗ್ ಮುಸುಕುಧಾರಿಗಳಾಗಿ ಬೆಂಗಳೂರಿನ ಸಹಕಾರನಗರದ ಮನೆಯೊಂದರಿಂದ ಕಳವು ಮಾಡಿತ್ತು. ವೈದ್ಯ ಡಾ. ಉಮಾಶಂಕರ್ ಮನೆಗೆ ನುಗ್ಗಿ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿತ್ತು. ತಡೆಯಲು ಬಂದ ಮನೆಯವರಿಗೆ ಗನ್ ತೋರಿಸಿ ಗ್ಯಾಂಗ್ ಪರಾರಿಯಾಗಿತ್ತು.

ಈ ಬಗ್ಗೆ ಮನೆಯವರು ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಫಹೀಮ್ ಎ1 ಆರೋಪಿಯಾಗಿದ್ದಾನೆ. ಬಳಿಕ ಈತನ ಬಂಧನಕ್ಕೆ ಕೊಡಿಗೆಹಳ್ಳಿ ಪೊಲೀಸರು ಬಲೆ‌ ಬೀಸಿದ್ದರು. ಘಟನೆ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಫಹೀಮ್‌ನನ್ನು ಉತ್ತರ ಪ್ರದೇಶದಲ್ಲಿ ಬಲೆಗೆ ಕೆಡವಲಾಗಿದೆ. ಜತೆಗೆ ಆತನ ಮನೆಯನ್ನೂ ನೆಲಸಮಗೊಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Theft Case: ಬೈಕ್ ಕಳ್ಳನ ಬಂಧನ; 21 ಲಕ್ಷ ರೂ. ಮೌಲ್ಯದ 42 ದ್ವಿಚಕ್ರ ವಾಹನಗಳ ವಶ