Friday, 13th December 2024

Udaipur horror: ಥೈಯ್ಲೆಂಡ್‌ ಯುವತಿಗೆ ಗುಂಡೇಟು: ಆಸ್ಪತ್ರೆಗೆ ದಾಖಲಿಸಿ ಹುಡುಗರು ಎಸ್ಕೇಪ್‌- ಭಾರೀ ನಿಗೂಢವಾಗಿದೆ ಈ ಕೇಸ್‌!

Udaipur horror

ಜೈಪುರ: ರಾಜಸ್ಥಾನದ ಉದಯಪುರದಲ್ಲಿ (Udaipur) ಶನಿವಾರ ಥಾಯ್ಲೆಂಡ್‌ನ (Thailand) ಮಹಿಳೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ (Udaipur horror) ನಡೆಸಿದ ಘಟನೆ ವರದಿಯಾಗಿದೆ. ದಾಳಿ ನಡೆಸಿದ ಉದ್ದೇಶ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡು ನಡು ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಯನ್ನು ಮೂರು ಹುಡುಗರು ಆಸ್ಪತ್ರೆಗೆ ದಾಖಲು ಮಾಡಿ ನಂತರ ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಮೂವರನ್ನು ಹುಡುಕುತ್ತಿದ್ದಾರೆ.

ಮಹಿಳೆಯನ್ನು ಥಾಯ್ಲೆಂಡ್ ಪ್ರಜೆ ಥೋಗ್‌ಖೋಟ್ ಥಾಂಚನೋಕ್ (24)  ಎಂದು ಗುರುತಿಸಲಾಗಿದೆ. ಮಹಿಳೆ ಪ್ರವಾಸಕ್ಕಾಗಿ ಆಗಸ್ಟ್‌ನಲ್ಲಿ ಭಾರತಕ್ಕೆ ಆಗಮಿಸಿ ಅಕ್ಟೋಬರ್ 21 ರಂದು ಉದಯಪುರ ತಲುಪಿದ್ದಳು ಎಂದು ತಿಳಿದು ಬಂದಿದೆ. ಉದಯಪುರದ ಹೊಟೇಲ್ ವೀರ್ ಪ್ಯಾಲೇಸ್ ನಲ್ಲಿ ತಂಗಿದ್ದಳು. ತೊಗ್ಕೋಟ್ ಸ್ನೇಹಿತ ಕೂಡ ಅವಳೊಂದಿಗೆ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ. ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಇಬ್ಬರೂ ಊಟ ಮಾಡಿದರು. ತಡರಾತ್ರಿ ಹೊಟೇಲ್‌ನಿಂದ ಹೊರಬಂದು ಮಧ್ಯರಾತ್ರಿ 1.31ಕ್ಕೆ ಹೊರಗೆ ನಿಲ್ಲಿಸಿದ್ದ ಟ್ಯಾಕ್ಸಿಯಲ್ಲಿ ಹೊರಗೆ ತೆರಳಿದ್ದಾಳೆ ಎಂದು ತಿಳಿದು ಬಂದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹೊಟೆಲ್‌ ಹಾಗೂ ಗುಂಡಿನ ದಾಳಿ ನಡೆದ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿದ ಉದಯಪುರ ಎಸ್‌ಪಿ, ಥಂಚನೋಕ್ ಅವರ ಎದೆಯ ಮೇಲೆ ಮತ್ತು ಬೆನ್ನಿನ ಮೇಲೆ ಆಳವಾದ ಗಾಯವಾಗಿದೆ , ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಹೇಳಿದರು. ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆ ಸಂಪೂರ್ಣವಾಗಿ ಗುಣಮುಖರಾಗಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಅವರು ತಿಳಿಸಿದ್ದಾರೆ.

ಗಾಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಹಿಳೆಯನ್ನು ಮೂವರು ಹುಡುಗರು ಹತ್ತಿರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಕರಣದ ಗಂಭೀರತೆ ಅರಿತ ವೈದ್ಯರು ಮಹಿಳೆಯನ್ನು ಮಹಾರಾಣಾ ಭೂಪಾಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡುವಂತೆ ಹೇಳಿದ್ದಾರೆ. ನಂತರ ಮೂರು ಹುಡುಗರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ಪೊಲೀಸರು ಹೋಟೆಲ್‌ಗೆ ತೆರಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆದರೆ ಮಹಿಳೆಯ ಬಗ್ಗೆ ಯಾರಿಗೂ ಗೊತ್ತಿಲ್ಲ‌ ಎಂದು ತಿಳಿದು ಬಂದಿದೆ. ಹೆಚ್ಚಿನ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ.

ಇದನ್ನೂ ಓದಿ: Diljit Dosanjh’s Jaipur Concert: ದಿಲ್ಜಿತ್‌ ಜೈಪುರ ಸಂಗೀತ ಕಾರ್ಯಕ್ರಮದಲ್ಲಿ ಅಧ್ವಾನ; ನೂರಾರು ಮೊಬೈಲ್‌ ಕಳವು; ಕುಡಿಯಲು ನೀರಿಲ್ಲದೆ ಹಾಹಾಕಾರ